ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಭರವಸೆಯಂತೆ ಯಮುನಾ ನದಿ ಶುದ್ಧೀಕರಣ ಕಾರ್ಯ ಆರಂಭ.

47

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಆಯ್ಕೆಯಾಗಿ ಸರ್ಕಾರ ರಚನೆ ಇನ್ನೂ ಆಗಿಲ್ಲ. ಈ ಸಂದರ್ಭದಲ್ಲಿ ಯಮುನಾ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ 4 ಹಂತದ ಕಾರ್ಯತಂತ್ರವನ್ನು ಆಧರಿಸಿ ಯಮುನಾ ನದಿಯ ಶುದ್ಧೀಕರಣ ಕಾರ್ಯ ಆರಂಭವಾಗಿದೆ. ನದಿಯಿಂದ ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ಲು ಯಂತ್ರಗಳು, ಹೂಳೆತ್ತುವ ಸಾಧನಗಳು ಮತ್ತು ಡ್ರೆಡ್ಜರ್‍ನೊಂದಿಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭವಾಗಿದೆ ಎಂದು ರಾಜ್ ನಿವಾಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಫೆಬ್ರವರಿ 8 ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಾಲಿನ್ಯ ಮುಕ್ತ ಯಮುನಾಗೆ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಮೊನ್ನೆ ಶನಿವಾರ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಯಮುನಾ ನದಿ ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.