ಇನ್ಮುಂದೆ ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಬಂದ್; ರಾಜ್ಯ ಸರ್ಕಾರ ಆದೇಶ.

76

ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿತರಣೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1 ರಿಂದ 10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ರೂಪದಲ್ಲಿ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಅಪರ್ಯಾಪ್ತ ಕೊಬ್ಬಿನಾಂಶ ಹೆಚ್ಚಿಗೆ ಇದ್ದು, ಇದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಚಿಕ್ಕಿಯನ್ನು ಸರಿಯಾಗಿ ಸಂಗ್ರಹಿಸದೇ ಇದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ವಿತರಣೆ ಸ್ಥಗಿತಗೊಳಿಸಿ, ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಹಾಗೂ ಧಾರವಾಡ ಅಪರ ಆಯುಕ್ತರು ಕೋರಿದ್ದರು. ಇದೇ ರೀತಿಯ ಆಗ್ರಹ ಇನ್ನೂ ಕೆಲ ಜಿಲ್ಲೆಗಳಿಂದಲೂ ವ್ಯಕ್ತವಾಗಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.