ಬೆಂಗಳೂರು: ಗ್ರಾಹಕರಿಗೆ ಮಾರಾಟ ಮಾಡುವ ಸಲುವಾಗಿ ಎಂಡಿಎಂಎ ಡ್ರಗ್ ಇಟ್ಟು, ಲೊಕೇಷನ್ ಕಳುಹಿಸಲು ಸ್ನೇಹಿತನೊಂದಿಗೆ ಕಾರಿನಲ್ಲಿ ಬಂದಿದ್ದ ವಿದೇಶಿ ಪ್ರಜೆಯನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ನೈಜೀರಿಯಾ ಮೂಲದ ಅಡಿಯಾಕೋ ಮುಸಾಲಿಯೋ ಕೊಲೆಯಾದ ವಿದೇಶಿ ಪ್ರಜೆ. ಯಾಸೀನ್ ಖಾನ್ ಬಂಧಿತ ಆರೋಪಿ. ಫೆ.19ರಂದು ಬಾಗಲೂರಿನ ಬೆಳ್ಳಳ್ಳಿ ಬಳಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೃತನ ಬಳಿಯಿದ್ದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹತ್ಯೆ ಸಂಬಂಧ ನೈಜೀರಿಯಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯಾದ ವಿದೇಶಿ ಪ್ರಜೆ ಅಡಿಯಾಕೋ ಮುಸಾಲಿಯೋ ಸ್ನೇಹಿತನೊಂದಿಗೆ ಬುಧವಾರ ಬೆಳಗ್ಗೆ ಬೆಳ್ಳಳ್ಳಿಗೆ ಕಾರಿನಲ್ಲಿ ಬಂದಿದ್ದ. ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ ಡ್ರಗ್ಸ್ ಅವಿತಿಟ್ಟು, ಲೊಕೇಷನ್ ತೆಗೆದುಕೊಳ್ಳಲು ಓಡಾಡುತ್ತಿದ್ದ. ಅನುಮಾನಾಸ್ಪಾದವಾಗಿ ಓಡಾಡುತ್ತಿರುವ ಬಗ್ಗೆ ಯಾಸೀನ್ ಖಾನ್ ಗಮನಿಸಿದ್ದ. ಡ್ರಗ್ಸ್ ಮಾರಾಟ ಮಾಡಲು ಬಂದಿದ್ದೀರಾ ಎಂದು ಪ್ರಶ್ನಿಸಿ ಚಿಕನ್ ಅಂಗಡಿಯೊಂದರ ಮುಂದೆ ಗಲಾಟೆ ಮಾಡಿದ್ದ. ಮಾತು-ಮಾತಿಗೆ ಬೆಳೆದು ವಿಕೋಪಕ್ಕೆ ಹೋಗುತ್ತಿದ್ದಂತೆ ಚಿಕನ್ ಅಂಗಡಿಯಲ್ಲಿದ್ದ ಆಯುಧದಿಂದ ಹಲ್ಲೆ ಮಾಡಲು ಮುಸಾಲಿಯೋ ಮುಂದಾಗಿದ್ದಾನೆ. ಇದರಿಂದ ಸಿಟ್ಟಾದ ಯಾಸೀನ್, ಅಲ್ಲೇ ಬಿದ್ದಿದ್ದ ಮರದ ತುಂಡಿನಿಂದ ವಿದೇಶಿ ಪ್ರಜೆಯ ತಲೆಗೆ ಹೊಡೆದಿದ್ದಾನೆ. ಅಪಾಯದಿಂದ ಪಾರಾಗಲು ವಿದೇಶಿ ಪ್ರಜೆಯು ಬೆಳ್ಳಳ್ಳಿ ಬೆಟ್ಟದ ಬಳಿ ಓಡುವಾಗ ಸುಸ್ತಾಗಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿ ಭಾರತಕ್ಕೆ ಯಾವ ವೀಸಾದಡಿ, ಯಾವಾಗ ಬಂದಿದ್ದ. ಯಾರೊಂದಿಗೆ ವಾಸವಾಗಿದ್ದ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತನ ವಿರುದ್ಧ ಈವರೆಗೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಕೃತ್ಯದ ಸಂದರ್ಭದಲ್ಲಿ ಪರಾರಿಯಾಗಿರುವ ಮತ್ತೋರ್ವ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಸಿಕ್ಕ ಬಳಿಕ ನಿಖರ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.










