ಮೂಡಿಗೆರೆ : ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹17.5 ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ರಂಜಿತ್ ಡಿ.ಜಿ. ಹೇಳಿದರು.

ದಾರದಹಳ್ಳಿಯ ಸಂಘದ ಆವರಣದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ನಿಮ್ಮೆಲ್ಲರ ಸಹಕಾರದೊಂದಿಗೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ರೈತರ ಹಿತದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ ಒದಗಿಸಲು ಜಿಲ್ಲಾ ಸಹಕಾರ ಬ್ಯಾಂಕಿಗೆ ₹2 ಕೋಟಿ ಸಾಲದ ಬೇಡಿಕೆ ಸಲ್ಲಿಸಲಾಗಿದೆ. ಸಾಲ ಮಂಜೂರಾದಲ್ಲಿ ರೈತರಿಗೆ ಅಗತ್ಯ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.
ಸಾರ್ವಜನಿಕರು ಹಾಗೂ ಸದಸ್ಯರ ಅನುಕೂಲಕ್ಕಾಗಿ ಸಂಘದ ವತಿಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಂಘದ ಅಭಿವೃದ್ಧಿಗೆ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸುವ ಆಶಯ ಹೊಂದಿದ್ದು, ಇದಕ್ಕೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ರಂಜಿತ್ ಡಿ.ಜಿ. ಹೇಳಿದರು.
ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಧಾರ್ಮಿಕ ದಿನೇಶ್, ನಿರ್ದೇಶಕರಾದ ರಂಜನ್, ಅಜಿತ್ ಕುಮಾರ್, ವಿಕ್ರಂ ದಾರದಹಳ್ಳಿ, ರವಿ ಹಾಲೂರು, ದೀಪಕ್ ಕಡಿದಾಳು, ಸಿದ್ದೇಶ್ ಕೆಸವಳಲು, ರಂಜಿತ್ ಕೆಸವಳಲು, ಆನಂದಚಾರಿ, ಸೀನಾ, ಸುನೀತಾ, ಅರುಣಾಕ್ಷಮ್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಿತೀನ್ ಪಟೇಲ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್, ಸಿಬ್ಬಂದಿಗಳಾದ ರಾಮಚಂದ್ರ, ಸ್ಮಿತಾ, ಶ್ರೀಮಂತ್, ವಿಗ್ನೇಶ್, ಆನಂದ್, ಅಶ್ವಥ್ ಸೇರಿದಂತೆ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.










