ಆಪರೇಷನ್ ಗಜ ಕಾರ್ಯಾಚರಣೆ ವಿರೋಧಿಸಿ ಮೂಡಿಗೆರೆ ಬಂದ್ ಯಶಸ್ವಿ

12

 ಶಿವಲಿಂಗೇಗೌಡರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ; ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಕ್ಕೆ ಡಿಸಿಎಫ್ ಭರವಸೆ

ಮೂಡಿಗೆರೆ: ಬೇಲೂರು ಭಾಗದಿಂದ ಮೂಡಿಗೆರೆ ಮೂಲಕ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಕೈಗೊಂಡಿರುವ ಆಪರೇಷನ್ ಗಜ ಕಾರ್ಯಾಚರಣೆಯನ್ನು ವಿರೋಧಿಸಿ ಸರ್ವಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮೂಡಿಗೆರೆ ತಾಲೂಕು ಬಂದ್ ಯಶಸ್ವಿಯಾಯಿತು.

ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಬಂದ್ ಸಂಜೆಯವರೆಗೂ ಮುಂದುವರಿಯಿತು. ಪಟ್ಟಣದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆಟೋ ಸಂಚಾರ ಸ್ಥಗಿತಗೊಂಡಿತ್ತು. ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ನ್ಯಾಯಾಲಯದಿಂದ ಮೆರವಣಿಗೆ ನಡೆಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಶ್ಚಿಮ ವಲಯ ಐಜಿಪಿ ಎನ್. ಶಶಿಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಸುಮಾರು ಒಂದು ಗಂಟೆ ಕಾಲ ಮೂಡಿಗೆರೆ-ಕಡೂರು ರಾಷ್ಟ್ರೀಯ ಹೆದ್ದಾರಿ 173ರಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಆನೆಗಳಿಂದ ಧ್ವಂಸಗೊಂಡ ಕಾಫಿ ಹಾಗೂ ಅಡಿಕೆ ಗಿಡಗಳನ್ನು ರಸ್ತೆಯಲ್ಲಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಡಿಸಿಎಫ್ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಬಳಿಕ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಒತ್ತಡದ ಹಿನ್ನೆಲೆಯಲ್ಲಿ ಡಿಸಿಎಫ್ ಬೋರಯ್ಯ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಕಾಡಾನೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

ಮಲೆನಾಡಿನ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ

ಕಾಫಿ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳ ಅರಿವಿಲ್ಲದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ತಮ್ಮ ಕ್ಷೇತ್ರದ ಜನರನ್ನು ಮೆಚ್ಚಿಸುವ ಉದ್ದೇಶದಿಂದ ಮಲೆನಾಡಿನಲ್ಲಿ ಆಪರೇಷನ್ ಗಜ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಾಗಲೇ ಕಾಡಾನೆ ಹಾಗೂ ಕಾಡೆಮ್ಮೆ ಹಾವಳಿಯಿಂದ ಮಲೆನಾಡಿನಲ್ಲಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ನಾಶದ ಜೊತೆಗೆ ಜೀವಹಾನಿಯೂ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ 50ಕ್ಕೂ ಅಧಿಕ ಆನೆಗಳನ್ನು ಈ ಭಾಗದ ಮೂಲಕ ಭದ್ರಾ ಅಭಯಾರಣ್ಯಕ್ಕೆ ಸಾಗಿಸುವ ಪ್ರಯತ್ನ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಲೂರು ಗಡಿ ದಾಟಿ ಬಂದಿರುವ ಕಾಡಾನೆಗಳು ಮೂಡಿಗೆರೆ ತಾಲೂಕಿನ ಬೊಮ್ಮೇನಹಳ್ಳಿ, ಘಟದಹಳ್ಳಿ ಹಾಗೂ ಕಾರ್‌ಬೈಲ್ ಎಸ್ಟೇಟ್ ಪ್ರದೇಶಗಳಲ್ಲಿ ಬೀಡುಬಿಟ್ಟು ತೋಟಗಳನ್ನು ಧ್ವಂಸಗೊಳಿಸುತ್ತಿವೆ. ಇದರಿಂದ ಈಗಾಗಲೇ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಿದೆ. ಈ ನಷ್ಟವನ್ನು ಯಾರು ಭರಿಸುತ್ತಾರೆ? ತೋಟಗಳನ್ನೇ ನಂಬಿ ಬದುಕುತ್ತಿರುವ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಕೂಡಲೇ ಆಪರೇಷನ್ ಗಜ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ನಾಯಕರು ಹಾಗೂ ಸಂಘಟನೆಗಳ ಆಕ್ರೋಶ

ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ತಾಲೂಕಿನ ಜನರು ತಾಳ್ಮೆಯಿಂದಿದ್ದಾರೆ ಎಂಬ ಕಾರಣಕ್ಕೆ ಅದನ್ನು ದೌರ್ಬಲ್ಯವೆಂದು ಭಾವಿಸಬಾರದು. ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಕಾಡಾನೆಗಳನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು. ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ವಿಚಾರ ಮುಂದಿಟ್ಟು ಜನರ ದಿಕ್ಕುತಪ್ಪಿಸುವ ಬದಲು ಆಡಳಿತ ಪಕ್ಷದ ಶಾಸಕರಾಗಿ ಸರ್ಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಇದು ಕಾಫಿ ಕೊಯ್ಲಿನ ಸಮಯ. ಗೌತಹಳ್ಳಿ ಹಾಗೂ ಬಾರದಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶವಾಗುತ್ತಿದೆ. ಆಟೋ ಚಾಲಕರು ಆ ಭಾಗಕ್ಕೆ ಬಾಡಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಗಮನಹರಿಸದ ಸಚಿವ ಶಿವಲಿಂಗೇಗೌಡ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಧ್ವನಿ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆಸವಳಲು ರಾಘವೇಂದ್ರ ಮಾತನಾಡಿ, ರೈತರನ್ನು ಕೆಣಕಬೇಡಿ. ಮಲೆನಾಡಿಗರೆಂದರೆ ಅಷ್ಟು ಹಗುರವಾಗಿ ಭಾವಿಸಬೇಡಿ. ನಿಮ್ಮ ಕ್ಷೇತ್ರದ ಜನರು ಮಾತ್ರ ಮನುಷ್ಯರಲ್ಲ, ಮಲೆನಾಡಿನ ರೈತರು ಮನುಷ್ಯರಲ್ಲವೇ? ಆನೆಗಳನ್ನು ಡ್ರೈವ್ ಮಾಡುವಾಗ ಈ ಭಾಗದಲ್ಲಿಯೂ ಬೆಳೆಗಾರರು ಬದುಕುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಕಾರ್ಯಾಚರಣೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಜವಾಬ್ದಾರಿಯನ್ನೂ ಸರ್ಕಾರ ಹೊರಬೇಕು ಎಂದು ಆಗ್ರಹಿಸಿದರು.

ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರೀಜೇಶ್ ಕಡಿದಾಳು ಮಾತನಾಡಿ, ಮಲೆನಾಡಿಗೆ ಒಂದೆರಡು ಆನೆಗಳು ಬರುವುದು ಸಹಜ. ಜನರು ಅದಕ್ಕೆ ಹೊಂದಿಕೊಂಡು ಬದುಕುತ್ತಿದ್ದಾರೆ. ಆದರೆ ಜನರ ಮೇಲೆ ದಾಳಿ ನಡೆಸಿದ್ದ ಹಂತಕ ಆನೆಗಳನ್ನು ಈಗಾಗಲೇ ಸೆರೆಹಿಡಿದು ಅಭಯಾರಣ್ಯಕ್ಕೆ ಬಿಡಲಾಗಿದೆ. ಈಗ ಏಕಾಏಕಿ 50ಕ್ಕೂ ಅಧಿಕ ಆನೆಗಳನ್ನು ಆಪರೇಷನ್ ಗಜ ಹೆಸರಿನಲ್ಲಿ ಡ್ರೈವ್ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದರು.

ಪಪಂ ಮಾಜಿ ಅಧ್ಯಕ್ಷ ಪಿ.ಜಿ. ಅನುಕುಮಾರ್ ಮಾತನಾಡಿ, ಈ ಭಾಗದಲ್ಲಿ ವರ್ಷಕ್ಕೆ ಸುಮಾರು 300 ಇಂಚು ಮಳೆಯಾಗುತ್ತದೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗುವ ನಡುವೆ ಕಾಡಾನೆ ಹಾಗೂ ಇತರ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಜಮೀನುಗಳನ್ನು ಪಾಳು ಬಿಡುವ ಪರಿಸ್ಥಿತಿ ಎದುರಾಗಿದೆ. ಬೇಲೂರಿನಿಂದ ಬಲವಂತವಾಗಿ ಕರೆತಂದಿರುವ ಕಾಡಾನೆಗಳನ್ನು ವಾಪಸ್ ಅಟ್ಟಬೇಕು. ಇಲ್ಲದಿದ್ದರೆ ಮುಂದಿನ ದಿನದಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಶಿವಪ್ರಸಾದ್ ಎಸ್.ಆರ್. ಮಾತನಾಡಿ, ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದು, ಅವರಲ್ಲಿ ಮೂವರು ರಾಜೀನಾಮೆ ನೀಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕಾಡಾನೆ ಸಮಸ್ಯೆಗೆ ಕಾರಣವಾಗಿರುವ ಸಚಿವ ಶಿವಲಿಂಗೇಗೌಡ ಹಾಗೂ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಬೇಕು. ಪ್ರತಿಭಟನೆಗೆ ಬೆಂಬಲ ನೀಡದ ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಧ್ವನಿ ಸಂಘದ ಅಧ್ಯಕ್ಷ ಹಳಸೆ ಜಯಕುಮಾರ್ ಮಾತನಾಡಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿಯಾಗುತ್ತಿದ್ದರೂ ಬೆಳೆಗಾರರ ಸಂಘದ ಒಬ್ಬ ಪದಾಧಿಕಾರಿಯೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸದಿರುವುದು ವಿಷಾದನೀಯ. ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಂಘದ ಅವಶ್ಯಕತೆಯಾದರೂ ಏನು? ಸಂಘವು ರಾಜಕೀಯ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದೇ ರೀತಿ ಮುಂದುವರಿದರೆ ಸಂಘದಲ್ಲಿ ಒಗ್ಗಟ್ಟು ಉಳಿಯುವುದು ಕಷ್ಟ ಎಂದರು.

ಪ್ರತಿಭಟನಾಕಾರರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೂಡಿಗೆರೆ ಶಾಸಕರು ಜನರ ಸಂಕಷ್ಟದ ಸಂದರ್ಭದಲ್ಲಿ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರಾದ ಜೆ.ಎಸ್. ರಘು, ಕೆ.ಸಿ. ರತನ್, ಜಾಕಿರ್ ಹುಸೇನ್, ಭರತ್ ಬಾಳೂರು, ಪ್ರಸಾದ್ ಬಕ್ಕಿ, ಪಟ್ಟದ್ದೂರ್ ಕಾರ್ತಿಕ್ . ಲೋಕಹಳ್ಳಿ ರಮೇಶ್, ಪತ್ರಕರ್ತರಾದ ಸಂತೋಷ್ ಅತ್ತಿಗೆರೆ   ಹೂವಪ್ಪ, ಡಿ.ಎಸ್. ರಮೇಶ್‌ಗೌಡ, ಬಿ.ಸಿ. ದಯಾಕರ್, ಗಬ್ಬಳ್ಳಿ ಚಂದ್ರೇಗೌಡ, ವಿಜಯ್‌ಕುಮಾರ್, ವಿಭಾ ಸುಷ್ಮಾ,  ನಳಂದ ಶಾಲೆಯ ಗಣೇಶ್ ವಿಕ್ರಂ   ಬಣಕಲ್, ಟಿ.ಎಂ. ಗಜೇಂದ್ರ, ಸಿ.ಆರ್. ನೇಮರಾಜ್, ಎಲ್.ಬಿ. ರಮೇಶ್, ಸಂಜಯ್ ಕೊಟ್ಟಿಗೆಹಾರ, ಜಗದೀಪ್ ಹಂಡುಗುಳ .ಪಿ. ಜಗದೀಶ್, ದೀಪಕ್ ದೊಡ್ಡಯ್ಯ, ಡಿ.ಕೆ. ಲಕ್ಷ್ಮಣ್‌ಗೌಡ, ಜಕರಿಯ ಜಾಕಿರ್, ಬ್ರೀಜೇಶ್ ಕಡಿದಾಳು ಸೇರಿದಂತೆ ವಕೀಲರಾದ ರಘು, ಡಿ.ಕೆ. ಪ್ರಸನ್ನಕುಮಾರ್, ಡಿ ಎಸ್ ಸುಧೀರ್ , ನಟರಾಜ್, ವಿಶಾಲ, ಅರ್ಪಿತಾ, ಹಿರಿಯ ವಕೀಲರಾದ ಗೋಪಾಲ್ ಗೌಡ. ಕರ್ನಾಟಕ ಧ್ವನಿ ಸಂಘದ  ಪುನೀತ್ ಕಡಿದಾಳ್, ಕೆಸವಳಲು ಸುಂದರೇಶ್  ಉಪಾಧ್ಯಕ್ಷರಾದ ನೂತನ್ ಬೆಟ್ಟಿಗೆರೆ, ನಗರಧ್ಯಕ್ಷರಾದ ಮನೋಜ್ ಕುಮಾರ್, ಬಾಲು ಶೆಟ್ಟಿ, ಅಭಿಷೇಕ್ ಹಡ್ಲು ಗದ್ದೆ, ನವೀನ್, ಸಂತೋಷ್ ಕೋಟಿಯನ್, ರಂಜಿತ್ ಬೈದವಳ್ಳಿ, ಆದರ್ಶ ಪಟದೂರ್, ಅನಿಲ್ ಹಂತೂರು,  ಉಪಸ್ಥಿತರಿದ್ದರು.