ನಾವು ಮೇಲೆ ಬರಬೇಕೆಂದರೆ ನಮ್ಮ ಆಲೋಚನೆ ಬದಲಿಸಿಕೊಳ್ಳಬೇಕು.- ಕೆ.ಟಿ ರಾಧಕೃಷ್ಣ…

604
firstsuddi

ಚಿಕ್ಕಮಗಳೂರು: ಶ್ರೀ ಸವಿತಾ ಮಹರ್ಷಿ ಜಯಂತಿಯ ಆಚರಣೆಗೆ ರಾಜ್ಯ ಸರ್ಕಾರ ಆದೇಶ ಮಾಡಿರುವುದು ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾದ ಕೆ.ಟಿ ರಾಧಕೃಷ್ಣರವರು ಹೇಳಿದರು. ಇಂದು ಶ್ರೀ ಸವಿತಾ ಮಹರ್ಷಿ ಜಯಂತಿಯ ಆಚರಣೆಗೆ ರಾಜ್ಯ ಸರ್ಕಾರ ಆದೇಶ ಮಾಡಿರುವುದಕ್ಕೆ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಚಿಕ್ಕಮಗಳೂರು ಜಿಲ್ಲಾ ಘಟಕ ಆಜಾದ್ ಪಾರ್ಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂದನಾ ಸಮಾರ್ಪಣೆ ಹಾಗೂ ಸಹಿ ಹಂಚಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಶ್ರೀ ಸವಿತಾ ಮಹರ್ಷಿ ಜಯಂತಿ ಕೇವಲ ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮುದಾಯದವರನ್ನು ಒಳಗೊಂಡ ಕಾರ್ಯಕ್ರಮ ಮಾಡುವುದರ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ನಾಡಿಗೆ ತಿಳಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು. ಜಾತಿ ಎನ್ನುವುದು ಬದುಕಿಗಾಗಿ ಒಂದು ಕಾಯಕ, ಚಿಂತನೆಯಿರುವ ನೀವು ಜಾತಿಗೆ ಅಂಟಿಕೊಳ್ಳದೆ ವಿಶ್ವಮಾನವರಾಗಿ ಎಂದು ಹೇಳಿದರು. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ನಾವು ಮೇಲೆ ಬರಬೇಕೆಂದರೆ ನಮ್ಮ ಆಲೋಚನೆ ಬದಲಿಸಿಕೊಳ್ಳಬೇಕು. ಇದು ನಿಮಗೆ ಸಿಕ್ಕ ಜಯ ಇದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಜನಧನಿ ಸಂಘಟನೆಯ ಬಿ. ಅಮ್ಜದ್ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಿ ಎಂದು ನೀವು ರಾಜ್ಯ ಸರ್ಕಾರಕ್ಕೆ ಸಹಿ ಸಂಗ್ರಹ ಹಾಗೂ ಪತ್ರ ಚಳುವಳಿಯಂತಹ ಹೋರಾಟವನ್ನು ಮಾಡಿ ರಾಜ್ಯ ಸರ್ಕಾರ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡುವಂತೆ ಮಾಡಿದ್ದಿರ. ಇದು ಖುಷಿಯ ವಿಚಾರವಾಗಿದ್ದು ಆದರೆ ಜಯಂತಿಗಳನ್ನೂ ಯಾರದೋ ಅಪ್ಪಣೆ ತೆಗೆದುಕೊಂಡು ಮಾಡಬೇಕಾದ ಅಗತ್ಯ ಇಲ್ಲ, ಸಮಾಜದಲ್ಲಿರುವ ಈ ಸ್ತರ ಪದ್ದತಿಯಲ್ಲಿ ಸರಿಸಮಾನವಾಗಿ ನಡೆಯಲು ಸಂವಿಧಾನ ಬದ್ದವಾಗಿ ನೀಡಿರುವ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಇದರಂತೆ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಸರ್ಕಾರದ ಆದೇಶ ಮಾಡಿರುವುದು ಖುಷಿಯ ವಿಚಾರವಲ್ಲದೆ ಇದೊಂದು ಸವಾಲಾಗಿದೆ. ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಿಕೊಂಡು ಸಮಾಜವನ್ನು ರೋಗಗ್ರಸ್ತರನ್ನಾಗಿಸುವ ಹುನ್ನಾರ ನಡೆಯುತಿದೆ ಈ ಸಂದರ್ಭದಲ್ಲಿ ಇಡಿ ಮನುಕುಲವನ್ನು ಶೃಂಗಾರಗೊಳಿಸುವ ಸವಿತಾ ಸಮುದಾಯದವರು ಬಹಳ ಪ್ರಜ್ಞಾಪೂರ್ವಕವಾಗಿ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆ ಮಾಡಬೇಕಿದೆ. ನಮ್ಮ ಸ್ವಾಭಿಮಾನವನ್ನು ಬಿಟ್ಟು ಬದುಕುವ ಅವಶ್ಯಕತೆ ಇಲ್ಲ, ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಅದರ ವಿರುದ್ದ ಸಿಡಿದೇಳುವ ಪ್ರತಿಜ್ಞೆಯನ್ನು ಸವಿತಾ ಸಮುದಾಯ ಭಾಂದವರು ಈ ಸಂದರ್ಭದಲ್ಲಿ ಮಾಡಬೇಕೆಂದು ಕರೆ ನೀಡಿದರು.
ನಂತರ ಮಾತನಾಡಿದ ರೈತ ಮುಖಂಡ ಗುರುಶಾಂತಪ್ಪ, ಸವಿತಾ ಮಹರ್ಷಿ ಜಯಂತಿಗೆ ಸರ್ಕಾರ ಆದೇಶ ಮಾಡಿರುವುದು ಐತಿಹಾಸಿಕ ಜಯವಾಗಿದೆ. ಕೋಮುವಾದಿಗಳ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಕಪಿ ಮುಷ್ಠಿಯಿಂದ ಕೆಳವರ್ಗದಿಂದ ಬಂದಂತಹ ಮಹಾಪುರುಷನ ಜಯಂತಿಯನ್ನು ಇದುವರೆಗೂ ಮಾಡಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಕೆಳವರ್ಗವಾದ ಸವಿತಾ ಮಹರ್ಷಿ ಜಯಂತಿಯನ್ನು ರಥ ಸಪ್ತಮಿಯಂದು ಮಾಡಲು ರಾಜ್ಯ ಸರ್ಕಾರ ನಿರ್ಧಾರಿಸಿರುವುದು ಈ ವರ್ಗದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ದಲಿತ್ ಜನಾ ಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ತಳ ಸಮುದಾಯ ಸಮಾಜಕ್ಕೆ ಆದರ್ಶಗಳನ್ನು ಹೇಳುವ ಮಟ್ಟಿಗೆ ಬೆಳೆದು ಬಂದಿದೆ. ಮೂಲ ಕಾಯಕಕ್ಕೆ ಅವಲಂಬಿಸಿಕೊಳ್ಳದೆ ಅದರ ಜೊತೆಗೆ ಉತ್ತಮ ಶಿಕ್ಷಣ ಪಡೆಯುವಂತಾಗಬೇಕು. ಮಹನೀಯರ ತತ್ವ ಆದರ್ಶಗಳನ್ನು ನಮ್ಮ ಮೈಗೂಡಿಸಿಕೊಳ್ಳಬೇಕು, ಜಯಂತಿ ಆಚರಣೆಗೆ ಆದೇಶ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ವಿಶ್ವನಾಥ್, ಜಯಂತಿ ಆಚರಣೆಯ ಕಾರ್ಯಕ್ರಮದ ವೇದಿಕೆಯನ್ನು ನಮ್ಮ ಸಮುದಾಯದವರ ಧಮನಿತ ಕೂಗನ್ನು ಹಾಗೂ ನಮ್ಮ ಬೇಡಿಕೆಯನ್ನು ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಮುಟ್ಟಿಸುವ ವೇದಿಕೆಯನ್ನಾಗಿ ಮಾಡಿಕೊಳ್ಳುವುದರ ಜೊತೆಗೆ ಎಲ್ಲಾರೂ ಒಟ್ಟಾಗಿ ಕಟ್ಟಕಡೆಯ ಸಮಾಜದ ಬಂಧುವನ್ನು ಮೇಲೆತ್ತಲು ಈ ವೇದಿಕೆಯನ್ನು ಬಳಸಿಕೊಳ್ಳೊಣ ಎಂದು ಹೇಳಿದರು.
ಇದೇ ವೇಳೆ ಸಾರ್ವಜನಿಕರಿಗೆ ಸಿಹಿ ಹಂಚಿ ಶುಭಾಷಯ ವಿನಿಮಯ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ. ಮಾಧವ್, ಖಜಾಂಚಿ ಶಿವಕುಮಾರ್, ಟೈಟಾನಿಕ್ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಜೆ.ಸತ್ಯನಾರಾಯಣ್, ಸಂಪತ್ ಕುಮಾರ್, ಚಂದ್ರಶೇಖರ್, ತೇಗೂರು ವಿಜಯ್, ಅಂಬಳೆ ಸಿದ್ದರಾಜ್, ಸಂದೇಶ್, ದೃವ, ಕುರುವಂಗಿ ಶ್ರೀನಿವಾಸ್, ಪುರುಷೊತ್ತಮ ಮುಂತಾದವರು ಭಾಗವಹಿಸಿದ್ದರು.