ಚಿಕ್ಕಮಗಳೂರು: ಆಧುನಿಕತೆಯ ಭರದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಸುಗಮ ಸಂಗೀತ ಗಂಗಾ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಹೇಳಿದರು.ನಗರ ಹೊರವಲಯದ ಕುರುವಂಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಜಾನಪದ ನಮ್ಮ ಪೂರ್ವಜರ ಬದುಕಿನ ಅನುಭವದ ಸಾಹಿತ್ಯ, ಕಲ್ಪನೆಯಿಂದ ರಚಿತವಾದುದಲ್ಲ, ಕಾಯಕದ ನಡುವೆ ಅರಳಿರುವ ಅದು ನಮ್ಮ ಸಂಸ್ಕøತಿಯ ಮೂಲಬೇರು ಮತ್ತು ಸಾರ್ವಕಾಲಿಕ ಸಾಹಿತ್ಯ ಎಂದರು.ಜಾನಪದ ಗೀತೆ, ಗಾದೆ ಮತ್ತು ಒಗಟುಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಅವರು ನಮ್ಮ ಹಿರಿಯರು ಕಟ್ಟಿಕೊಟ್ಟಿರುವ ಜಾನಪದವನ್ನು ಮಕ್ಕಳು ವಿದ್ಯಾರ್ಥಿದೆಸೆಯಿಂದಲೇ ಕಲಿಯುವ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಆ ಮೂಲಕ ನಮ್ಮ ಸಂಸ್ಕøತಿಯ ಬೇರನ್ನು ಗಟ್ಟಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್ ಜಾನಪದವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಅದರ ತವರಾದ ಹಳ್ಳಿಯಿಂದಲೇ ಆರಂಭಿಸುವ ಉದ್ದೇಶದಿಂದ ಈ ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ವಿದ್ಯಾರ್ಥಿಗಳಲ್ಲಿ ಜಾನಪದದ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಸದ್ಯದಲ್ಲೇ ಜಾನಪದ ಗೀತೆಗಳ ಗಾಯನ ಸ್ಪರ್ಧೆಯನ್ನು ಶಾಲೆಯಲ್ಲಿ ನಡೆಸಲಾಗುವುದು ಎಂದರು.
ಪರಿಷತ್ತಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಗಾಯಕ ಬಕ್ಕಿ ಮಂಜುನಾಥ್ ಸಮಾರಂಭದಲ್ಲಿ ಜಾನಪದ ಗೀತೆಗಳನ್ನು ಮತ್ತು ಒಗಟುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.ಶಾಲೆಯ ಮುಖ್ಯಶಿಕ್ಷಕ ಬಿ.ಆರ್.ಶೇಖರಪ್ಪ ಉಪಸ್ಥಿತರಿದ್ದರು,ವಿದ್ಯಾರ್ಥಿನಿ ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕರಾದ ಕೆ.ಜಿ.ನೀಲಕಂಠಪ್ಪ ಸ್ವಾಗತಿಸಿದರು, ಪಾಲಾಕ್ಷ ವಂದಿಸಿದರು.










