ಸನಾತನ ಧರ್ಮದ ಆಚರಣೆಗಳಲ್ಲೊಂದು ‘ಮಹಾಲಯ ಪೂಜೆ’…

586
firstsuddi

 ರಾಘವೇಂದ್ರ ಕೆಸವಳಲು

ಮನುಷ್ಯನ ಬದುಕಿನ  ಪ್ರತಿ ಘಟ್ಟದಲ್ಲಿಯೂ ಕೂಡ ಅವನು ತನ್ನ ಮೂಲ ಹಾಗೂ ಪೂರ್ವಜರನ್ನು ಸ್ಮರಿಸುವುದು ಅನಾದಿಕಾಲದಿಂದಲೂ ನಡೆದು ಬಂದಿರುವ ಪದ್ಧತಿ. ಸನಾತನ ಧರ್ಮದಲ್ಲಿ ಪ್ರತಿ ಆಚರಣೆಗೂ ಅರ್ಥಪೂರ್ಣ ಹಿನ್ನಲೆ ಇದೆ.

     ಕುರುಕ್ಷೇತ್ರ ಯುದ್ಧದಲ್ಲಿ ಮರಣ ಹೊಂದುವ ಕರ್ಣ ಸ್ವರ್ಗಾರೋಹಿಯಾಗುತ್ತಾನೆ. ಆದರೆ ಅವನನ್ನು ಸ್ವರ್ಗದಲ್ಲಿ ಆಹಾರಕ್ಕೆ ಬದಲಾಗಿ ಹೊನ್ನಿನೊಂದಿಗೆ ಸತ್ಕರಿಸಲಾಗುತ್ತದೆ. ಚಿಂತೆಗೊಳಗಾದ ಕರ್ಣ ಇಂದ್ರನಲ್ಲಿ ಪ್ರಶ್ನಿಸುತ್ತಾನೆ, “ ಇದೇನು ದೇವೆಂದ್ರ ನನಗೆ ಇಲ್ಲಿ ಆಹಾರಾದಿಗಳು ದೊರೆಯುವುದಿಲ್ಲವೇ?” ಎಂದು ಆಗ ಇಂದ್ರನು ಕರ್ಣಾ ನೀನು ಬದುಕಿರುವಾಗ ಎಂದೂ ಕೂಡ ನಿನ್ನ ಪೂರ್ವಜರಿಗೆ ತರ್ಪಣವನ್ನು ನೀಡಿಲ್ಲ ಅದರ ಫಲವೇ ಇದು ಎಂದು. ಇದಕ್ಕೆ ಪರಿಹಾರಾರ್ಥವಾಗಿ ಹದಿನಾರು ದಿನಗಳ ಅವಧಿಗೆ ಭೂಮಿಗೆ ಹಿಂದಿರುಗುವ ಕರ್ಣ ತನ್ನ ಪೂರ್ವಜರಿಗೆ ತರ್ಪಣವನ್ನು ನೀಡಿ ಮೋಕ್ಷ ಹೊಂದುತ್ತಾನೆ. ಅಂದಿನಿಂದ ಭಾದ್ರಪದ ಮಾಸದ ಎರಡನೇ ಪಕ್ಷದ ಅವಧಿಯಲ್ಲಿ ಮಹಾಲಯ ಅಮಾವಸ್ಯೆಯವರೆಗೂ ನಮ್ಮನ್ನಗಲಿದ ಪೂರ್ವಜರಿಗೆ ಅನ್ನ ಆಹಾರಾದಿಗಳನ್ನು ನೀಡುವ ಪದ್ಧತಿ ಭಾರತಾದ್ಯಂತ ನಡೆದುಕೊಂಡು ಬಂದಿದೆ.

    ನಮ್ಮ ಬದುಕಿನ ಎಲ್ಲಾ ಕಾರ್ಯಗಳಿಗೂ ಪೂರ್ವಜರ ಆಶೀರ್ವಾದ ಅತಿ ಮುಖ್ಯ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಮಹಾಲಯದ ಆಚರಣೆ ನಡೆದು ಬಂದಿದೆ. ಆದರೆ ಉದ್ದೇಶ ಮಾತ್ರ ಪಿತೃ ತರ್ಪಣ. ಆ ಕಾರಣದಿಂದಲೇ ಭಾದ್ರಪದ ಮಾಸದ ಎರಡನೇ ಪಕ್ಷವನ್ನು ಪಿತೃಪಕ್ಷವೆಂದೂ ಕರೆಯುತ್ತಾರೆ.  ಅವರವರ ಸ್ಥಿತಿಗತಿಗೆ ಅನುಗುಣವಾಗಿ ಪಿತೃಗಳಿಗೆ ಅನ್ನ ಆಹಾರಾದಿಗಳನ್ನು ನೀಡುವ ಪದ್ಧತಿ ಇದೆ. ಕೆಲವರು ಶಾಖಾಹಾರಿ ಪದಾರ್ಥಗಳಿಂದ ಪಿತೃ ತರ್ಪಣ ನೀಡಿದರೆ ಇನ್ನೂ ಕೆಲವರು ಮಾಂಸಾಹಾರಿ ಖಾದ್ಯಗಳಿಂದ ತಮ್ಮ ಪೂರ್ವಜರಿಗೆ ತರ್ಪಣ ನೀಡುತ್ತಾರೆ. ಈ ಸಂದರ್ಭದಲ್ಲಿ ಶುದ್ಧಾಚಾರಿಗಳಾಗಿ ಕುಟುಂಬದ ಸದಸ್ಯರು ಅವರವರ ಪದ್ಧತಿಗೆ ತಕ್ಕಂತೆ ವಿವಿಧ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಶ್ರದ್ಧೆಯಿಂದ ಪಿತೃಗಳಿಗೆ ಎಡೆ ನೀಡುತ್ತಾರೆ. ಮಹಾಲಯ ಅಮಾವಸ್ಯೆಯಂದು ಪಿತೃಗಳಿಗೆ ಎಡೆ ನೀಡುವ ಹಲವರು ನೂರೊಂದು ಬಗೆಯ ಖಾದ್ಯಗಳಿಂದ ತರ್ಪಣ ನೀಡುವ ಪದ್ಧತಿ ಹಲವೆಡೆ ಆಚರಣೆಯಲ್ಲಿದೆ.

  ಹಿಂದೂ ಧರ್ಮದ ಮೂಲ ಆಚರಣೆಗಳಲ್ಲೊಂದಾದ ಪಿತೃಪಕ್ಷದ ಆಚರಣೆಯಿಂದ ನಾವು ನಮ್ಮ ಪೂರ್ವಜರನ್ನು ಸಂತೃಪ್ತಿಗೊಳಿಸುವ ಈ ಸಂದರ್ಭದಲ್ಲಿ ನಮ್ಮ ಜೊತೆಗಿರುವ ಹಿರಿ ಜೀವಗಳನ್ನು ಕೂಡ ಸದಾ ಪ್ರೀತಿ ಹಾಗೂ ಆದರಗಳಿಂದ ನೋಡಿಕೊಳ್ಳುತ್ತೇವೆ ಎಂಬ ಸಂಕಲ್ಪ ಮಾಡಿದರೆ ಖಂಡಿತ ಮನ್ವಂತರಗಳವರೆಗೂ  ನಮ್ಮ ಪೂರ್ವಜರ ಆಶೀರ್ವಾದ ನಮ್ಮ ಸಂತತಿಗಳ ಮೇಲಿರುತ್ತದೆ.