ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಒರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಕಳಸ ಸಮೀಪ ಕಾರಗದ್ದೆ ಗ್ರಾಮದ ಬಳಿ ನಡೆದಿದೆ.ಕಳಸ ಹಂದಿಹಡ್ಲು ಬಾಬು(50)ಮೃತಪಟ್ಟ ವ್ಯಕ್ತಿ. ಬಾಬುರವರು ಹೊಸದಾಗಿ ಕಟ್ಟುತ್ತಿರುವ ಮನೆಗೆ ಪಿಕಪ್ ವಾಹನವೊಂದರಲ್ಲಿ ಸೈಜ್ ಕಲ್ಲನ್ನು ಲೋಡ್ ಮಾಡಿಕೊಂಡು ತೋಡ್ಲು ಬರಗೋಡು ಮಾರ್ಗವಾಗಿ ಹಂದಿಹಡ್ಲುಗೆ ಸಾಗಿಸುತ್ತಿದ್ದರು.ವಾಹನದ ಹಿಂದೆ ಬಾಬು ಮತ್ತು ದೇಜಪ್ಪ ಕುಳಿತಿದ್ದರು.ವಾಹನವನ್ನು ಮಣಿ ಚಲಾಯಿಸುತ್ತಿದ್ದರು.ಪಕ್ಕದಲ್ಲಿ ಹರೀಶ ಎಂಬುವವರು ಕುಳಿದ್ದರು.ಬರಗೋಡು ಎತ್ತರದ ಕಚ್ಚಾ ರಸ್ತೆಯಲ್ಲಿ ವಾಹನ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹಿಂದೆ ಬರಲಾರಂಬಿಸಿದೆ.ಕೂಡಲೇ ವಾಹನದಿಂದ ಇಳಿದ ದೇಜಪ್ಪ ವಾಹನದ ಚಕ್ರಕ್ಕೆ ಕಲ್ಲು ಕೊಟ್ಟಿದ್ದಾರೆ.ಆದರೂ ನಿಯಂತ್ರಣಕ್ಕೆ ಬಾರದೆ ಪಿಕಪ್ ಜಾರಿಕೊಂಡು ಬಂದು ಸುಮಾರು 50 ಅಡಿ ದೂರ ಹೋಗಿ ಉದ್ದಿನ ಮಕ್ಕಿ ರಸ್ತೆಗೆ ಬಿದ್ದಿದೆ.ಬಿದ್ದ ರಭಸಕ್ಕೆ ಮೇಲೆ ಕೂತಿದ್ದ ಬಾಬುರವರು ಕೆಳಗೆ ಬಿದ್ದು ಕಲ್ಲು ಅವರ ತಲೆಗೆ ಬಿದ್ದಿದೆ. ತಲೆಗೆ ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೆ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಪ್ರಾಣ ಬಿಟ್ಟಿದ್ದಾರೆ.ಚಾಲಕ ಮಣಿ ಮತ್ತು ಹರೀಶಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.










