ಸಂತ ಶ್ರೀ ತ್ಯಾಗರಾಜರು, ಶ್ರೀ ಪುರಂದರದಾಸರು ಮತ್ತು ಕನಕದಾಸರ ಆರಾಧನೆ ಅಂಗವಾಗಿ ವಿದುಷಿ ಪಾವನಿ ನಾಗಸಿಂಹ ಅವರಿಂದ ದಾಸವಾಣಿ ಕಾರ್ಯಕ್ರಮ…

189
firstsuddi

ಚಿಕ್ಕಮಗಳೂರು : ಸಂತ ಶ್ರೀ ತ್ಯಾಗರಾಜರು, ಶ್ರೀ ಪುರಂದರದಾಸರು ಮತ್ತು ಕನಕದಾಸರ ಆರಾಧನೆ ಅಂಗವಾಗಿ ನಗರದ ಶಂಕರಮಠದ ಪ್ರವಚನ ಮಂದಿರದಲ್ಲಿ ವಿದುಷಿ ಪಾವನಿ ನಾಗಸಿಂಹ ಅವರಿಂದ ಇತ್ತೀಚೆಗೆ ನಡೆದ ದಾಸವಾಣಿ ಕಾರ್ಯಕ್ರಮ ಸಂಗೀತಾಸಕ್ತರ ಗಮನ ಸೆಳೆಯಿತು.
ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಗಾಯಕಿ ಪಾವನಿ ಅವರ ಕಂಚಿನ ಕಂಠದಲ್ಲಿ ಮೂಡಿಬಂದ ದಾಸರ ಪದಗಳು ಮತ್ತು ಕೃತಿಗಳು ಕೇಳುಗರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾದವು.
ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರ ಸ್ಮರಣೆ ಶ್ಲೋಕದೊಂದಿಗೆ ಗಾನಯಾನವನ್ನು ಆರಂಭಿಸಿದ ಪಾವನಿ ನಾಗಸಿಂಹ ಕಛೇರಿಯುದ್ದಕ್ಕೂ ಸಂತ ಶ್ರೀ ತ್ಯಾಗರಾಜರು, ಪುರಂದರದಾಸರು, ಕನಕದಾಸರು ಸೇರಿದಂತೆ ಅನೇಕ ದಾಸರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕೇಳುಗರ ಮನಗೆದ್ದರು.
ವಯೋಲಿನ್‍ನಲ್ಲಿ ಮತ್ತೂರಿನ ವಿದ್ವಾನ್ ಮಧುಮುರಳಿ ಹಾಗೂ ಮೃದಂಗದಲ್ಲಿ ವಿದ್ವಾನ್ ಡಾ|| ನಾಗಸಿಂಹ ಅವರ ವಾದನ ಮುದ ನೀಡಿತು.
ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಉಪಾಧ್ಯಕ್ಷ ಆನಂದ್‍ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಖಜಾಂಚಿ ಬಿ.ರಣಜಿತ್ ಸಿಂಗ್, ಗೋಪಾಲಕೃಷ್ಣ, ವಿನೀತ್ ಕುಮಾರ್, ಮುಕುಂದ ಜೋಯ್ಸ್ ಉಪಸ್ಥಿತರಿದ್ದರು.