ಮೂಡಿಗೆರೆ- ತಾಲೂಕಿನ ಕಳಸದ ಅಂಬುತೀರ್ಥದ ಜಲಪಾತದ ಬಳಿ ಬಂಡೆ ಮೇಲೆ ನಿಂತು ಸೆಲ್ಫಿ ಹೊಡೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಇಂದು ಭದ್ರಾ ನದಿಯಲಿ ತೇಲಿಬಂದಿದೆ. ಜುಲೈ 26 ರಂದು ಮಂಗಳೂರಿನ ತುಂಬೆ ನಿವಾಸಿ ಹಾಗೂ ಇಂಜಿನಿಯರ್ ಕಿರಣ್ ಕೊಟ್ಯಾನ್ ತನ್ನ 12 ಸ್ನೇಹಿತರೊಂದಿಗೆ ಟ್ರಿಪ್ ಬಂದಿದ್ದ. ಅಂದು ಅಂಬುತೀರ್ಥದಲ್ಲಿ ಫೋಟೋ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಭದ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ. ಅಂದಿನಿಂದಲೂ ಸ್ಥಳಿಯರು, ಪೋಲಿಸರು ಹಾಗೂ ಯುವಕನ ಸಂಬಂಧಿಕರು ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದರು. ಆದರೆ, ಮೃತದೇಹ ಪತ್ತೆಯಾಗಿರಲಿಲ್ಲ. ವಾರದ ಬಳಿಕ ಸ್ಥಳಕ್ಕೆ ಬಂದ ಎನ್.ಡಿ.ಆರ್.ಎಫ್ ತಂಡ ಕೂಡ ನೀರಿನ ರಭಸ ಕಂಡು ಕೈಚೆಲ್ಲಿತ್ತು. ಖಾಸಗಿ ಮುಳುಗು ಈಜು ತಜ್ಞರು ಹುಡುಕಾಟ ನಡೆಸಿದರು ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ, ನಿನ್ನೆ ಸಂಜೆಯಿಂದ ಸುರಿದ ಭಾರೀ ಮಳೆಗೆ 15 ದಿನಗಳ ಬಳಿಕ ಮೃತದೇಹ ಅದಾಗೇ ತೇಲಿಕೊಂಡು ಬಂದಿದ್ದು, ಬಾಳೆಹೊನ್ನೂರಿನ ಮಾಗುಂಡಿ ಬಳಿ ಮೃತದೇಹ ಪತ್ತೆಯಾಗಿದ್ದು, ಕಳಸ ಸಬ್ ಇನ್ಸ್ಪೆಕ್ಟರ್ ಹಾಗೂ ಮುಳುಗು ಈಜು ತಜ್ಞರು ತುಂಬಿ ಹರಿಯುತ್ತಿರೋ ಭದ್ರಾ ನದಿಯಲ್ಲಿ ಮೈಗೆ ಹಗ್ಗ ಕಟ್ಟಿಕೊಂಡು ನದಿಗೆ ಇಳಿದು ಹರಸಾಹಸ ಪಟ್ಟು ಮೃತದೇಹವನ್ನ ಮೇಲೆಕ್ಕೆ ತಂದಿದ್ದಾರೆ.