ಉಡುಪಿ: ಅಕ್ರಮ ಆಸ್ತಿ ಗಳಿಕೆ ಆರೋಪ ಕುರಿತಂತೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಉಡುಪಿಯಲ್ಲಿರುವ ಅವರ ಮನೆಗೂ ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ಉಡುಪಿ ಚಾಂತಾರಿನಲ್ಲಿರುವ ಡಾ ಬಿ ಸುಧಾ ಅವರ ಪತಿಯ ಮನೆಯ ಮೇಲ ಹಾಗೂ ಹೆಬ್ರಿ ತೆಂಕಬೆಟ್ಟುವಿನಲ್ಲಿರುವ ಸಂಬಂಧಿಕರ ಮನೆಯ ಮೇಲೆ ಕೂಡ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ಹಿಂದೆ ಉಡುಪಿಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ಉಡುಪಿಯ ವಡ್ಡರ್ಸೆ ಮತ್ತು ಕಂದಾವರ ಬಳಿಯೂ ಆಸ್ತಿ ಹೊಂದಿದ್ದು ಈ ಜಮೀನುಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ ಮನೆ, ಕಚೇರಿ ಸೇರಿದಂತೆ 6 ಕಡೆ ದಾಳಿ ನಡೆಸಲಾಗಿದೆ . ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಕುರಿತು ದೂರು ದಾಖಲಾಗಿತ್ತು ಎಂದು ಹೇಳಲಾಗಿದೆ. ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಮನೆಯ ಮೇಲೂ ದಾಳಿ ನಡೆಸಲಾಗಿದೆ ಎಂದೂ ವರದಿಯಾಗಿದೆ.
ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.










