ಕಳಸ :80 ಅಡಿ ಕಂದಕಕ್ಕೆ ಕಾರು ಪಲ್ಟಿ,ನಾಲ್ವರ ದುರ್ಮರಣ…

1718
firstsuddi

ಕಳಸ: ಯಕ್ಷಗಾನ ವೀಕ್ಷಣೆಗೆಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊಸ ಕಾರಿನಲ್ಲಿ ಆಗಮಿಸುತ್ತಿದ್ದ ಒಂದೇ ಕುಟುಂಬದ ಐವರಿದ್ದ ಕಾರೊಂದು ಕದಂಕಕ್ಕೆ ಉರುಳಿಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಳಸ ಹೋಬಳಿ ವ್ಯಾಪ್ತಿಯ ಹಿರೇಬೈಲು ಮಲ್ಲೇಶನಗುಡ್ಡದ ಹಾಳೆಮರದ ತಿರುವಿನಲ್ಲಿ ನಡೆದಿದೆ. ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಇಬ್ಬರು ಪುರುಷರು ಮೃತಪಟ್ಟಿದ್ದು, ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ವಿಶ್ವನಾಥ್(55), ಪುಪ್ಷಾವತಿ (48), ದಂಪತಿ ಹಾಗೂ ಉಪ್ಪಿನಂಗಡಿಯ ರಾಜು ರೈ(58),ಮಮತಾ(51), ದಂಪತಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸಂಜೀವ್ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು,  ಈ ಕುಟುಂಬದ ಸದಸ್ಯರು ಕಳಸ ಪಟ್ಟಣ ನಿವಾಸಿ ಹಾಗೂ ಉದ್ಯಮಿ ರವಿ ರೈ ಎಂಬುವರ ಸಂಬಂಧಿಕರು ಎನ್ನಲಾಗಿದೆ.

ಸೋಮವಾರ ಕಳಸ ಸಮೀಪದ ಬಾಳೆಹೊಳೆ ಗ್ರಾಮದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಬಂಧಿಕರು ಆಯೋಜಿಸಿದ್ದ ಯಕ್ಷಗಾನ ವೀಕ್ಷಣೆಗೆಂದು ಬಂಟ್ವಾಳದಿಂದ ಉಪ್ಪಿನಂಗಡಿ ಮುಖಾಂತರ ಚಾರ್ಮಾಡಿ ಘಾಟ್ ಹೆದ್ದಾರಿ ಮೂಲಕ ತಮ್ಮ ಹೊಸ ವ್ಯಾಗನಾರ್ ಕಾರಿನಲ್ಲಿ ಆಗಮಿಸಿದ್ದ ಇವರು ಕೊಟ್ಟಿಗೆಹಾರ ಕಳಸ ರಸ್ತೆಯಲ್ಲಿ ಆಗಮಿಸಿ ದಾರಿ ಮಧ್ಯೆ ಹಿರೇಬೈಲು ಎಂಬಲ್ಲಿ ಬಾಳೆಹೊಳೆ ಸಂಪರ್ಕಕ್ಕಿರುವ ಮಲ್ಲೇಶನಗುಡ್ಡದ ಒಳ ರಸ್ತೆಯಲ್ಲಿ ಮದ್ಯಾಹ್ನ 1.15ರ ಸಮಯಕ್ಕೆ ಬಾಳೆಹೊಳೆಯತ್ತ ಪ್ರಯಾಣಿಸುತ್ತಿದ್ದರು.

ಈ ಒಳ ರಸ್ತೆಯಿಂದ ಸುಮಾರು 10 ಕಿಮೀ ಪ್ರಯಾಣಿಸಿದ ಬಳಿಕ ಹಾಲು ಮರ ಎಂಬಲ್ಲಿರುವ ಕಾಫಿ ತೋಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 50 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ದೇಹಗಳನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಬಿಟ್ಟುಕೊಡಲಾಯಿತು.
ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.