ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ,ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು: ಡಾ|| ದೊಡ್ಡಮಲ್ಲಪ್ಪ…

435

ಚಿಕ್ಕಮಗಳೂರು : 2006ರಿಂದ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದು ಸರ್ಕಾರಿ ನೌಕರರಿಗೆ ಭರಿಸಲಾಗದ ನಷ್ಟವಾಗಿದೆ. ಈ ರೀತಿಯ ಹೋರಾಟಗಳಿಂದಷ್ಟೆ ನಿಮಗೆ ಜಯ ದೊರೆಯಲಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಗಳಾದ ಡಾ|| ದೊಡ್ಡಮಲ್ಲಪ್ಪ ಅಭಿಪ್ರಾಯಪಟ್ಟರು.
ಅವರು ಬುಧವಾರದಂದು ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಎಂಬ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಚಿಕ್ಕಮಗಳೂರು, ಕಡೂರು ತಾಲೂಕು ಘಟಕ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕದವತಿಯಿಂದ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ಬಹುಷಃ ನಿವೃತ್ತಿಯಾದ ನಂತರ ಪಿಂಚಣಿ ದೊರೆಯುತ್ತಿದ್ದ ಕೆಲಸವೆಂದರೆ ಅದು ಸರ್ಕಾರಿ ವೃತ್ತಿ. ಬಹಳಷ್ಟು ಜನ ಸರ್ಕಾರಿ ಕೆಲಸಕ್ಕೆ ಸೇರುತ್ತಿದದ್ದು ವೃತ್ತಿ ಜೀವನದಲ್ಲಿ ಸಂಬಳ ದೊರೆಯುತ್ತದೆ ಎಂಬ ಕಾರಣದಿಂದಷ್ಟೇ ಅಲ್ಲ, ನಿವೃತ್ತಿ ನಂತರ ಪಿಂಚಣಿ ದೊರೆತು ನಿವೃತ್ತಿಯ ನಂತರದ ಬದುಕಿಗೆ ಭದ್ರತೆ ಇರುತ್ತದೆ. ಆಕಸ್ಮಿಕವಾಗಿ ಮರಣ ಹೊಂದಿದರೆ ಕುಟುಂಬದವರಿಗೆ ಕೆಲಸ ಸಿಗುತ್ತದೆ ಎಂಬುದು ಪ್ರಮುಖ ಅಂಶವಾಗಿದೆ. ಈ ಒಂದು ಕಾರಣಕ್ಕೆ ಸರ್ಕಾರಿ ಕೆಲಸಕ್ಕೆ ಹೆಚ್ಚು ಜನರು ಆಸಕ್ತಿ ತೋರುತಿದ್ದರು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಅಧ್ಯಕ್ಷ ಮಂಜುನಾಥ ನೂತನ ಪಿಂಚಣಿ ಯೋಜನೆಯು ಸುದೀರ್ಘ ಸೇವೆ ಮಾಡಿದ ಸರ್ಕಾರಿ ನೌಕರರಿಗೆ ಇಳಿ ವಯಸ್ಸಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕಾದ ಪಿಂಚಣಿ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿವೆ. ಸರ್ಕಾರಿ ನೌಕರಿಗೆ ಜನರು ಬಹಳ ಖುಷಿಯಿಂದ ಬರುತಿದ್ದರು. ಆದರೆ ಈ ಹೊಸ ಪಿಂಚಣಿ ಯೋಜನೆಯಿಂದ ಯುವಕರು ಸಕಾರಿ ಕೆಲಸಕ್ಕೆ ಏಕೆ ಹೋಗಬೇಕು ಎಂದು ಹಿಂದೇಟು ಹಾಕುವ ಕಾಲ ಬಂದಿದೆ. ಈ ಹೊಸ ಪಿಂಚಣಿ ಯೋಜನೆಯಲ್ಲಿ ನಮ್ಮ ಸಂಬಳದ ಯಾವುದೇ ಭದ್ರತೆ ಇಲ್ಲ. ನಮಗೆ ನಿಶ್ಚಿತ ಪಿಂಚಣಿಯ ಬಗ್ಗೆ ಭದ್ರತೆ ಇಲ್ಲ. ಈಗಾಗಲೇ ಈ ಯೋಜನೆಯನ್ನು ರದ್ದುಗೊಳಿಸಿ ಎಂದು ಎನ್‍ಎಮ್‍ಒಪಿಎಸ್ ಸಂಘಟನೆಯ ನೇತೃತ್ವದಲ್ಲಿ ರಾಷ್ಟ್ರದ್ಯಂತ ಹೋರಾಟ ನಡೆಯುತ್ತಿದೆ. ಈಗಾಗಲೇ ಹಲವಾರು ಹೋರಾಟವನ್ನು ಮಾಡಿಕೊಂಡು ಬರುತಿದ್ದು ಜನವರಿಯಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ನಡೆಸಿದ ಬೃಹತ್ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ನಮಗೆ 6 ನೇ ವೇತನ ಆಯೋಗದಲ್ಲಿ ಡಿಸಿಆರ್‍ಜಿ ಯೀಜನೆಯನ್ನು ಜಾರಿಗೆ ತಂದಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ನಮ್ಮ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡದೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನೆ ನೀಡಬೇಕು. ಹೊಸ ಪಿಂಚಣಿ ಯೋಜನೆ ಇಳಿ ವಯಸ್ಸಿನಲ್ಲಿ ನಮ್ಮನ್ನು ಬಿಕ್ಷುಕರನ್ನಾಗಿಸುತ್ತದೆ. ನಾವು ನೀಡುವ ಶೇಕಡಾ 10 ರಷ್ಟು ಹಣವನ್ನು ಷೇರು ಮಾರುಟ್ಟೆಯಲ್ಲಿ ತೊಡಗಿಸುವುದರಿಂದ ನಮ್ಮ ಭವಿಷ್ಯತ್ತಿನ ಹೂಡಿಕೆಗೆ ಭವಿಷ್ಯವೆ ಇಲ್ಲದಂತಾಗುತ್ತದೆ. ಇದರಿಂದ ಈಗಾಗಲೇ ಹಲವಾರು ನಿವೃತ್ತ ಸರ್ಕಾರಿ ನೌಕರರು ಹಾಗೂ ಅಕಾಲಿಕ ಮೃತರಾದ ಕುಟುಂಬದವರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಜೀವಂತ ನಿದರ್ಶನಗಳಿವೆ. ಜೆಡಿಎಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಎನ್‍ಪಿಎಸ್ ಯೋಜನೆಯನ್ನು ರದ್ದುಗೊಳಿಸುವುದಾಗಿ ಚುನಾವಣೆ ಪೂರ್ವ ಭರವಸೆ ನೀಡಿದ್ದು, ಇದನ್ನು ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಈಡೇರಿಸಬೇಕೆಂದು ಒತ್ತಾಯಿಸಿದರು. ಸರ್ಕಾರಿ ನೌಕರರಾದ ನಾವು ಸಾಮಾಜಿಕ ಸೇವಾ ಮನೋಭಾವನೆಯಿಂದ ರಕ್ತ ಕೊಟ್ಟೆವು ಪಿಂಚಣಿ ಬಿಡೆವು ರಕ್ತದಾನ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ರಾಜ್ಯ ಕಾರ್ಯಕರಿಣಿ ಸದಸ್ಯರಾದ ವೇಣುಗೋಪಾಲ್ ಮಾತನಾಡಿ ನಮ್ಮ ಹೋರಾಟಕ್ಕೆ ಇಷ್ಟಕ್ಕೆ ಮುಗಿದಿಲ್ಲ. ಇನ್ನೂ ಹೆಚ್ಚಿನ ಹೋರಾಟದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿರುವ ಎಲ್ಲಾ ಎನ್‍ಪಿಎಸ್ ನೌಕರರು ಸ್ವಯಂ ಇಚ್ಚೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಹೋರಾಟದ ಗುರಿಯನ್ನು ತಲುಪಬಹುದು ಎಂದು ಹೇಳಿದರು. ರಕ್ತ ಕೊಟ್ಟರು ಪಿಂಚಣಿ ಬಿಡುವುದಿಲ್ಲ ಎನ್ನುವ ನಮ್ಮ ನೋವನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ರಕ್ತದಾನ ಶಿಬಿರಕ್ಕೆ ಬೇಟಿ ನೀಡಿದ ಶಾಸಕ ಸಿ.ಟಿ ರವಿಯವರು, ಹೊಸ ಪಿಂಚಣಿ ಯೋಜನೆಯ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ನಿಮ್ಮ ಈ ಹೋರಾಟದಿಂದ ಯೋಜನೆಯ ಸಮಸ್ಯೆಯ ಗಂಭೀರತೆ ಅರಿವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾನು ವಿಧಾನ ಸಭೆಯ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ನಿಶ್ಚಿತ ಪಿಂಚಣಿ ನಮ್ಮ ಹಕ್ಕು, ನಮ್ಮ ಹಕ್ಕನ್ನು ಪಡೆಯಲು ‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಎಂಬ ರಕ್ತದಾನ ಶಿಬಿರದ ಮೂಲಕ ನಮ್ಮ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಇದಕ್ಕೆ ಎಲ್ಲಾ ಎನ್‍ಪಿಎಸ್ ನೌಕರರು ಒಗ್ಗಟ್ಟಿನಿಂದ ಸಹಕಾರ ನೀಡಬೇಕೆಂದು ರಾಜ್ಯ ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಚೇತನ್ ಎಂ.ಆರ್ ಕರೆ ನೀಡಿದರು.

ಹಿಂದೆ ಸರ್ಕಾರಿ ನೌಕರನೆಂದರೆ ಎಲ್ಲಿಲ್ಲದ ಗೌರವ ಆದರೆ ಇಂದು ನಮ್ಮ ಸ್ಥಿತಿ ದುರ್ಬಲವಾಗಿದೆ. ಎನ್‍ಸಿಪಿ ನೌಕರರ ಸಂಘ ಏಪ್ರಿಲ್ 2006ರಿಂದ ಸರ್ಕಾರಿ ಸೇವೆಗೆ ಸೇರಿರುವ 2 ಲಕ್ಷ ನೌರರನ್ನು ಪ್ರತಿನಿಧಿಸುತ್ತದೆ. ನೂತನ ಪಿಂಚಣಿ ಯೋಜನೆಗೊಳಪಡುವ ನೌಕರರ ನಿವೃತ್ತ ಬದುಕಿಗಾಗಿ ಹಾಗೂ ಆಕಾಲಿಕ ಮರಣ ಹೊಂದುವ ನೌಕರರ ಅವಲಂಬಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮಖವಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರಿಗೆ 2006ರ ಏಪ್ರಿಲ್‍ನಿಂದ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆ ಮರಣ ಶಾಸನವಾಗಿದೆ. ಈ ಯೋಜನೆಯನ್ನು ರದ್ದುಗೊಳಿಸಿ 2006ಕ್ಕಿಂತ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು 2006ರ ಏಪ್ರಿಲ್‍ನಿಂದ ಸೇವೆಗೆ ಸೇರಿರುವ ಎಲ್ಲಾ ಸರ್ಕಾರಿ, ಸ್ವಾಯುತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಅನುದಾನಿತ ಸಂಸ್ಥೆಗಳ ಎನ್‍ಪಿಎಸ್ ನೌಕರರಿಗೆ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ವೇದಿಕೆಯಲ್ಲಿ ರಕ್ತದಾನ ಕೇಂದ್ರದ ಮುಖ್ಯಸ್ಥ ಡಾ|| ಮುರುಳಿಧರ್, ಪರಮೇಶ್, ಚಿರಂಜೀವಿ, ರೂಪಾ, ಮುಂತಾದವರು ಉಪಸ್ಥಿತರಿದ್ದರು.