ಚಿಕ್ಕಮಗಳೂರು- ಐಟಿ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡುತ್ತೇನೆ, ಯಾರು ಯಾವಾಗ ಬೇಕಾದ್ರು ನಮ್ಮ ಮನೆಯನ್ನು ರೇಡ್ ಮಾಡಬಹುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ರೇಡ್ ಮಾಡುವುದಾದ್ರೆ ಮೊದಲು ಶೋಭಾ ಕರಂದ್ಲಾಜೆ ಮನೆಯನ್ನೇ ಮಾಡಬೇಕು, ಯಡಿಯೂರಪ್ಪನವರ ದುಡ್ಡೆಲ್ಲಾ ಅಲ್ಲೇ ಇರೋದು ಎಂದು ಹೇಳಿದ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೇಳೂರು ಗೋಪಾಲಕೃಷ್ಟಾ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡ್ತಿದ್ದಾರೆ. ಅವರ ರಾಜಕೀಯದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ ತನಿಖೆ ನಡೆಸಲಿ ಎಂದು ಬೇಳೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡುತ್ತಿರುವ ಪಾಪಕ್ಕೆ ಅವರೇ ಕುಸಿದು ಹೋಗುತ್ತಾರೆ, ರಾಜ್ಯದ ಜನ ಕೂಡ ಅದನ್ನೇ ಕಾಯ್ತಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ರು.