ಸಂವಿಧಾನದಲ್ಲಿ ಅವಕಾಶವೇ ಇಲ್ಲದ ಸಿಎಎ, ಎನ್‌ಆರ್‌ಸಿ ಜಾರಿಗೆ ಮುಂದಾಗಿರುವವರು ದೇಶದ್ರೋಹಿಗಳಲ್ಲವೇ?-ಸಿದ್ದರಾಮಯ್ಯ.

267
firstsuddi

ಮೈಸೂರು : ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಿಜೆಪಿಯವರು ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಾಣಿ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪೌರತ್ವ ಕಾಯ್ದೆಗೆ ಮಾಡಿರುವ ತಿದ್ದುಪಡಿಯೇ ಸಂವಿಧಾನ ವಿರೋಧಿಯಾದುದು. ಇದಕ್ಕೆ ಯಾವ ಕಾನೂನಿನ ಮಹತ್ವ ಕೂಡಾ ಇಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಮಾಹಿತಿ ನೀಡಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಂವಿಧಾನ ರಚನಾ ಸಮಿತಿಯ 289 ಸದಸ್ಯರಲ್ಲಿ ಎಲ್ಲ ಪಕ್ಷಗಳ ನಾಯಕರು ಇದ್ದರು. ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಪೌರತ್ವ ನಿರ್ಧರಿಸುವಂತಿಲ್ಲ ಎಂದು ಎಲ್ಲರು ಒಪ್ಪಿದ ಮೇಲೆಯೇ ಸಂವಿಧಾನ ಅಂಗೀಕೃತಗೊಂಡದ್ದು. ಸಂವಿಧಾನದ ಈ ಮೂಲ‌ ಆಶಯವನ್ನು ಬದಲಿಸಲು ಯಾವ ಸರ್ಕಾರಕ್ಕೂ ಅಧಿಕಾರವಿಲ್ಲ. ದೇಶ ವಿಭಜನೆಯಾಗಿ ಧರ್ಮದ ಆಧಾರದಲ್ಲಿ ರಚನೆಯಾದದ್ದು ಪಾಕಿಸ್ತಾನ, ಭಾರತ ಅಲ್ಲ. ಅಂದು ದೇಶ ವಿಭಜನೆಯಾಗಬಾರದೆಂದು ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರನ್ನು ಪೂಜಿಸುವ ಜನರೇ ಇಂದು ಧರ್ಮದ ಆಧಾರದಲ್ಲಿ ದೇಶ ಒಡೆಯಲು ಸಿಎಎ, ಎನ್‌ಆರ್‌ಸಿ ಜಾರಿಗೊಳಿಸುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದವನನ್ನು ತಲೆಮೇಲೆ ಹೊತ್ತು ತಿರುಗುವವರು ದೇಶದ್ರೋಹಿಗಳಲ್ಲವೇ? ಸಂವಿಧಾನದಲ್ಲಿ ಅವಕಾಶವೇ ಇಲ್ಲದ ಸಿಎಎ, ಎನ್‌ಆರ್‌ಸಿ ಜಾರಿಗೆ ಮುಂದಾಗಿರುವವರು ದೇಶದ್ರೋಹಿಗಳಲ್ಲವೇ? ಈಗ ಹೇಳಲಿ ಸಂವಿಧಾನ ಉಳಿಸುವ ನಮ್ಮ ಹೋರಾಟ ಹೇಗೆ ದೇಶದ್ರೋಹವಾಗುತ್ತದೆ ಎಂದು? ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಾರೆ, ವಿಶ್ವವಿದ್ಯಾಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಾರೆ, ಕಣ್ಣೆದುರು ಗುಂಡು ಹಾರಿಸಿದರೂ, ಹಲ್ಲೆಗೈದರೂ ತಪ್ಪಿತಸ್ಥರನ್ನು ಬಂಧಿಸುವುದಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾ? ಎಂದು ಪ್ರಶ್ನಿಸಿದ್ದಾರೆ.

ಯಾರನ್ನೋ ಬಂಧಿಸಿದ್ದಾರೆ, ಗೋಲಿಬಾರ್‌ನಲ್ಲಿ ಯಾರೋ ಸತ್ತಿದ್ದಾರೆ, ಲಾಠಿ ಚಾರ್ಜ್‌ನಲ್ಲಿ ಯಾರಿಗೋ ಪೆಟ್ಟಾಗಿದೆ, ಯಾವುದೋ ಕಾಲೇಜಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆ, ಗುಂಡು ಹಾರಿಸಿದ್ದು ಬೇರೆ ಯಾರದ್ದೋ ಮೇಲೆ ಇವೆಲ್ಲ ನಮಗೇಕೆ, ನಾವು ಅರಾಮಿದ್ದೇವೆ ಎಂದು ಈಗ ಸುಮ್ಮನಾದರೆ, ನಾಳೆ ಇವರೆಲ್ಲ ನಿಮ್ಮ ಮನೆವರೆಗೂ ಬರ್ತಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಬಂದವರಿಗೆ ಪೌರತ್ವ ನೀಡುವ ಬಗ್ಗೆ ತಕರಾರಿಲ್ಲ. ಈ 3 ರಾಷ್ಟ್ರಗಳಿಂದ ಬಂದ ಮುಸ್ಲಿಮರ ಜೊತೆ ನೇಪಾಳ, ಬರ್ಮಾ, ಶ್ರೀಲಂಕಾ, ಭೂತಾನ್ ದೇಶಗಳಿಂದ ಬಂದ ವಿವಿಧ ಧರ್ಮಗಳ ಜನರನ್ನು ಹೊರಗಿಡಲು ಕಾರಣವೇನು? ಅವರೇನು ಮನುಷ್ಯರಲ್ಲವೇ? ಭಾರತದಂತಹ ಪ್ರಜಾಪ್ರಭುತ್ವ, ಜಾತ್ಯತೀತ, ಬಹುತ್ವದ ತಳಹದಿಯ ರಾಷ್ಟ್ರದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜಿಸಲು ಹೊರಟಿರುವುದನ್ನು ವಿರೋಧಿಸುವ ನಮಗೆ ಏಕೆ ಭಯ? ನಾವು ಸಂವಿಧಾನದ ಪರವಾಗಿದ್ದೇವೆ, ಹಾಗಾಗಿ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕೆ ಹೊರತು, ಭಯದಿಂದ ಉಡುಗಿ ಹೋಗಬಾರದು. ಎನ್‌ಪಿಆರ್,ಎನ್‌ಆರ್‌ಸಿ ನಡೆಸಿ ಸೂಕ್ತ ಮಾಹಿತಿ ನೀಡದವರನ್ನು ಬಂಧನ ಕೇಂದ್ರಗಳಲ್ಲಿ ಕೂಡಿಹಾಕಿ, ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು ಈ ಕಾಯ್ದೆಗಳ ಹಿಂದಿರುವ ಹುನ್ನಾರ. ಭಾರತದಂತಹ ಬಡ ರಾಷ್ಟ್ರದಲ್ಲಿ ಜನ ನಿತ್ಯ ಬದುಕಿಗಾಗಿ ಹೋರಾಡುವ ಸ್ಥಿತಿ ಇರುವಾಗ 50 ವರ್ಷದ ಹಿಂದಿನ ಮಾಹಿತಿ ನೀಡುವುದು ಸಾಧ್ಯವೇ? ಭಾರತ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇವು ಯಾವುದೋ ಒಂದು ಧರ್ಮಕ್ಕೆ ಸೀಮಿತವಲ್ಲ. ಇವು ಇಲ್ಲಿರುವ ಪ್ರತಿ ವ್ಯಕ್ತಿಯ ಹಕ್ಕು. ದೇಶ ವಿರೋಧಿ, ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ಕೈಬಿಡುವವರೆಗೂ ಈ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.