ಅಭಿಮಾನಿಗಳ ಪ್ರೋತ್ಸಾಹವಿರುವವರೆಗೆ ಕಲೆ ಮತ್ತು ಕಲಾವಿದ ಇರುತ್ತಾನೆ ಪ್ರೋತ್ಸಾಹ ಕರಗಿದರೆ ಕಲೆ ಮತ್ತು ಕಲಾವಿದ ಅಳಿಯುತ್ತಾನೆ: ಶ್ರೀಪಾದ ಹೆಗಡೆ…

504
firstsuddi

ಚಿಕ್ಕಮಗಳೂರು:ಸಾಂಸ್ಕøತಿಕ ಸಂಘ ಮತ್ತು ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಬಂಗಾರಮಕ್ಕಿಯ ವೀರಾಂಜನೇಯ ಯಕ್ಷಮಿತ್ರ ಮಂಡಳಿಯಿಂದ ಭಾನುವಾರ ನಡೆದ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಮಹಾಭಾರತ ಕಾಲದ ಧರ್ಮಪರತೆ, ಆದರ್ಶಗಳು ಮತ್ತು ಉನ್ನತ ಮೌಲ್ಯಗಳನ್ನು ನೋಡುಗರೆದುರು ಸಮರ್ಥವಾಗಿ ತೆರೆದಿಟ್ಟಿತು.
ಸೂರ್ಯದೇವನಿಗೆ ಅಘ್ರ್ಯ ಕೊಡುವ ವೇಳೆ ಅಘ್ರ್ಯದ ನೀರನ್ನು ಮಲಿನಗೊಳಿಸಿದ ಕುಬೇರನ ಪುತ್ರ ಗಯನ ಕಂಠವನ್ನು ಎಂಟು ದಿನದ ಒಳಗೆ ತೆಗೆಯುವುದಾಗಿ ಶ್ರೀಕೃಷ್ಣ ಪ್ರತಿಜ್ಞೆ ಮಾಡುತ್ತಾನೆ, ಇತ್ತ ಶರಣಾರ್ಥಿಯಾಗಿ ಬಂದ ಗಯನಿಗೆ ತನ್ನ ಪ್ರಾಣವನ್ನು ಒತ್ತೆಯಿಟ್ಟು ನಿನ್ನನ್ನು ರಕ್ಷಿಸುವುದಾಗಿ ಕಾಮ್ಯಕ ವನದಲ್ಲಿದ್ದ ಕೃಷ್ಣನ ಆತ್ಮಸಖ ಅರ್ಜುನ ಅಭಯ ನೀಡುತ್ತಾನೆ.
ನಂತರ ತನ್ನ ವೈರಿ ಗಯ ಅರ್ಜುನನ ರಕ್ಷಣೆಯಲ್ಲಿರುವುದು ಶ್ರೀಕೃಷ್ಣನಿಗೆ ಮತ್ತು ಗಯ ಶ್ರೀಕೃಷ್ಣನ ವೈರಿಯಾಗಿರುವ ವಿಷಯ ಅರ್ಜುನನಿಗೆ ತಿಳಿಯುತ್ತದೆ, ಒಂದೆಡೆ ತನ್ನ ಆತ್ಮಸಖ, ರಕ್ಷಕ, ಮತ್ತು ಭಾವನಾದ ಕೃಷ್ಣನೊಡನೆ ಯುದ್ದ ಮಾಡುವ ಅನಿವಾರ್ಯತೆಯಿಂದ ಅರ್ಜುನ ತೊಳಲಾಡಿದರೆ ಇನ್ನೊಂದೆಡೆ ತನ್ನ ತಂಗಿಯ ಗಂಡನೊಡನೆ ಯುದ್ದ ಮಾಡಬೇಕಾದ ಪರಿಸ್ಥಿತಿಯಿಂದ ಶ್ರೀಕೃಷ್ಣ ಹಾಗೂ ತನ್ನ ಗಂಡನನ್ನು ಇನ್ನೊಂದೆಡೆ ಅಣ್ಣನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಸುಭದ್ರೆ ಕಂಗಾಲಾಗುತ್ತಾಳೆ.
ಈ ಪ್ರಸಂಗವನ್ನು ಅರ್ಜುನನ ಪಾತ್ರಧಾರಿಯಾಗಿ ಶ್ರೀಪಾದ ಹೆಗಡೆ ಹಡಿನಬಾಳ, ಕೃಷ್ಣನಾಗಿ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಸುಭದ್ರೆಯಾಗಿ ಮೂರೂರು ಸುಬ್ರಹ್ಮಣ್ಯ ಹೆಗಡೆ ತಮ್ಮ ಮನಸ್ಸಿನ ತುಮುಲಗಳನ್ನು ಅತ್ಯಂತ ಸಮರ್ಥವಾಗಿ ಮತ್ತು ಭಾವನಾತ್ಮಕವಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದರು.
ಭಾಗವತ ಕೇಶವ ಹೆಗಡೆ ಕೊಳಗಿ ಅವರ ಕಂಚಿನ ಕಂಠದ ಗಾಯನ ಪಾತ್ರಧಾರಿಗಳ ಚುರುಕು ಸಂಭಾಷಣೆ ಮನೋಜ್ಞ ಅಭಿನಯ, ನವಿರು ಹಾಸ್ಯ ನೋಡುಗರನ್ನು ನಾಲ್ಕು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ದಾರುಕನ ಪಾತ್ರಧಾರಿ ಶ್ರೀಧರ ಹೆಗಡೆ ಚಪ್ಪರಮನೆ ಕಲಾ ಮಂದಿರದಲ್ಲಿ ನಗೆಯ ಬುಗ್ಗೆಯನ್ನು ಎಬ್ಬಿಸಿದರೆ ಇಬ್ಬರು ದಿಗ್ಗಜರಾದ 65ರ ವಯೋವೃದ ಶ್ರೀಪಾದ ಹೆಗಡೆ ಮತ್ತು ಸುಬ್ರಹ್ಮಣ್ಯ ಚಿಟ್ಟಾಣಿ ಪ್ರಸಂಗದ ಅಂತಿಮ ಭಾಗದಲ್ಲಿ 40 ನಿಮಿಷಗಳಷ್ಟು ಸುಧೀರ್ಘಕಾಲ ಮಾತಿನ ವರಸೆ ಮತ್ತು ಅಭಿನಯದ ಮೂಲಕ ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸಿದರು.
ಇದೇ ವೇಳೆ ಸಾಂಸ್ಕøತಿಕ ಸಂಘದ ವತಿಯಿಂದ ಶ್ರೀಪಾದ ಹೆಗಡೆ ಹಡಿನಬಾಳ ಮತ್ತು ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಅವರನ್ನು ಸನ್ಮಾನಿಸಲಾಯಿತು, ಕರ್ನಾಟಕ ಬ್ಯಾಂಕ್‍ನ ಮುಖ್ಯಪ್ರಬಂಧಕ ಕೆ.ಆರ್.ಅಜಿತ್ ಹಾಗೂ ಅಪರಾಧ ವಿಭಾಗದ ವತ್ತನಿರೀಕ್ಷಕ ವಿನೋದ್‍ಭಟ್ ಅವರನ್ನು ಗೌರವಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶ್ರೀಪಾದ ಹೆಗಡೆ, ಅಭಿಮಾನಿಗಳ ಪ್ರೋತ್ಸಾಹವಿರುವವರೆಗೆ ಕಲೆ ಮತ್ತು ಕಲಾವಿದ ಇರುತ್ತಾನೆ, ಪ್ರೋತ್ಸಾಹ ಕರಗಿದರೆ ಕಲೆ ಮತ್ತು ಕಲಾವಿದ ಅಳಿಯುತ್ತಾನೆ ಎಂದರು .
ತಮಗೆ ನೀಡಿದ ಗೌರವವನ್ನು ಸನ್ಮಾನವನ್ನಾಗಿ ಸ್ವೀಕರಿಸುತ್ತಿಲ್ಲ ಅದನ್ನು ಕಲಾ ಮಾತೆಯ ಪ್ರಸಾದವೆಂದು ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಸಾಂಸ್ಕøತಿಕ ಸಂಘದ ಗೌರವಾಧ್ಯಕ್ಷ ಎ.ಆರ್.ಶೇಷಾದ್ರಿ, ಅಧ್ಯಕ್ಷ ಗಿರಿಧರ್ ಯತೀಶ್, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ನಿರ್ದೇಶಕರಾದ ಶಂಕರನಾರಾಯಣ ಭಟ್, ವಿನೀತ್ ಕುಮಾರ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.