ಡಾ.ಎಂ.ಎಸ್.ಮಣಿ
ಭಾಗ – 1
ಜನವರಿ 14. ಅವತ್ತು, ಭೂಮಿಯೊಳಗಿರುವ ಬಾಬಾ ಸಾಹೇಬರ ಆತ್ಮ ಮತ್ತೊಮ್ಮೆ ನರಳಿರಲೇಬೇಕು. ಅದೇ ದಿನ ನನ್ನಂತಹ ಅದೆಷ್ಟೋ ಜನ ಹೊರಳಾಡಿರಬೇಕು. ಆ ದಿನ ರಾತ್ರಿ ನನ್ನವರು ತಿರುವಣ್ಣಾ ಮಲೈನ ಕುಗ್ರಾಮವೊಂದರ ಮಸಣದಲ್ಲಿ ಎಸ್ಟಿ ಪ್ರಮಾಣ ಪತ್ರ ಪಡೆಯಲು ಹಟ ಹಿಡಿದು ಕುಳಿತಿದ್ದು ನೆನಪಾಯಿತು. ಆಟ್ಟಪಾಡಿಯಲ್ಲಿ ತುತ್ತು ಅನ್ನಕ್ಕಾಗಿ ಬೊಗಸೆ ಅಕ್ಕಿ ಕದ್ದು, ಹತ್ಯೆಗೀಡಾದ ಮಧು ಆತ್ಮ ಕೂಡ ಬಂದು ರೋಧಿಸತೊಡಗಿತು.
ಆರ್ಥಿಕವಾಗಿ ದುರ್ಬಲಗೊಂಡವರಿಗೆ ಮೀಸಲು ಸಿಕ್ಕಿದಕ್ಕೆ ನನಗೆ ವ್ಯಥೆಯೂ ಇಲ್ಲ. ಅಸಮಾಧಾನವೂ ಇಲ್ಲ. ಸಂಭ್ರಮವೂ ಇಲ್ಲ. ಮೈ.ಸೂ.ನಾಗರಾಜ ಅವರಂತಹ ಅನೇಕ ಜನ ಬಡ ಸ್ನೇಹಿತರ ಬಳಗ ನನಗಿದೆ. ಇವರಿಗೆ ಮೀಸಲಾತಿ ಸಿಕ್ಕರೂ ನನಗೆ ಸಂತಸವಾಗುತ್ತಿಲ್ಲ. ಕಾರಣ, ಶೇಕಡ 10ರ ಮೀಸಲಾತಿ ಸಾಮಾಜಿಕ ನ್ಯಾಯ ಕಲ್ಪನೆಯ ವಿರುದ್ಧವಾಗಿದೆ.
ಬಡತನವನ್ನೇ ಹೊದ್ದು ಮಲಗಿರುವ ನನ್ನ ಜನರಿಗೆ ಹೋಲಿಸಿದರೆ, ನನ್ನ ಸ್ನೇಹಿತರು, ಮತ್ತವರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಇದೇನೆ ಇರಲಿ, ಇತ್ತೀಚೆಗೆ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷನೊಬ್ಬ ಗೆಳೆಯ ಮಿಂಚು ಶ್ರೀನಿವಾಸ್ ಗೆ ಕರೆ ಮಾಡಿ ಏನ್ರಿ, ನೀವು ನಮ್ಮಗಳ ವಿರುದ್ಧ ವಿಚಾರ ಸಂಕಿರಣ ಮಾಡುತ್ತೀರಾ ಎಂದು ದಬಾಯಿಸಿದ್ದಾರೆ. ಆ ಬುದ್ಧಿವಂತನಿಗೆ ಗೊತ್ತಿಲ್ಲ! ಒಕ್ಕಲಿಗರು ಮತ್ತು ಲಿಂಗಾಯತರು ಕೂಡ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು. ಇವರು ಕೂಡ ಮೀಸಲಾತಿಯ ಫಲಾನುಭವಿಗಳು. ಶೇಕಡಾ 49.5ರಷ್ಟು ಮೀಸಲಾತಿಯಲ್ಲಿ ಪಾಲುದಾರರಾಗಿದ್ದಾರೆ. ರಾಜ್ಯಪಟ್ಟಿ ಮಾತ್ರವಲ್ಲದೇ ಕೇಂದ್ರದ ಓಬಿಸಿ ಪಟ್ಟಿಯಲ್ಲೂ ಇದ್ದಾರೆಂಬ ಕನಿಷ್ಟ ಜ್ಞಾನವೂ ಅವರಲ್ಲಿ ಇಲ್ಲ.
ಶೇಕಡ 10ರ ಮೀಸಲಾತಿ ನೀತಿ ಮೇಲ್ವರ್ಗಗಳ ಹಿಂದೂಗಳನ್ನು ನಂಬಿಸುವ ಒಂದು ತಂತ್ರವಾಗಿದೆ. ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಇವರುಗಳು ಭಾಜಪ ವಿರುದ್ಧ ಮತ ಚಲಾಯಿಸಿದ್ದರು. ನೋಟು ಅಪಮೌಲ್ಯಗೊಳಿಸಿದಂತೆ ಶೇಕಡ 10ರ ಮೀಸಲಾತಿ ಕೂಡ ಒಂದು ಗಿಮಿಕ್ ಆಗಿದೆ.
ಇರಲಿ, 1990ರಲ್ಲಿ ಕಂಡು, ಕೇಳಿದ ದಿನಗಳಿಂದು ನೆನಪಾಗುತ್ತಿದೆ. ನಾನಷ್ಟೇ ಅಲ್ಲ, 1990ರ ಬೇಸಿಗೆ ಕಾಲವನ್ನು ಹಿಂದುಳಿದ ವರ್ಗಗಳು ಮರೆಯುವಂತೆಯೇ ಇಲ್ಲ. ಬಿ.ಪಿ.ಮಂಡಲ್ ಆಯೋಗದ ವರದಿ ಜಾರಿಗೆ ಬಂದಿದ್ದು, ಇದರ ವಿರುದ್ಧ ನಮ್ಮವರೇ ಪ್ರತಿಭಟಿಸಿದ್ದು ಐತಿಹಾಸಿಕ. ಅಂದು ಮಾಜಿ ಪ್ರಧಾನಿ ವ್ಹಿ.ಪಿ.ಸಿಂಗ್ ಅವರ ಪ್ರತಿಕೃತಿಯನ್ನು ನಮ್ಮವರೇ ಸುಟ್ಟು ಆನಂದಿಸುತ್ತಿದ್ದರು. ವ್ಹಿ.ಪಿ.ಸಿಂಗ್ ಅವರು ರಾಜಕೀಯ ಅಸ್ತಿತ್ವಕ್ಕೆ ಕಂಡುಕೊಂಡ ಹಂಚಿಕೆ ಇದೆಂದು ಮಾಧ್ಯಮಗಳು ಬಣ್ಣಿಸಿದವು. ದೆಹಲಿ ಕುದಿಯಲಾರಂಭಿಸಿತು. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಪ್ರತಿಭಟನೆಯ ಸುನಾಮಿಯೇ ಎದ್ದಿತ್ತು. ಇದೀಗ ಮೇಲ್ವರ್ಗದ ಬಡವರಿಗೆ ಶೇಕಡ 10 ಮೀಸಲು ಕಲ್ಪಿಸಲಾಗಿದೆ. ಸಾಮಾಜಿಕವಾಗಿ ಹಿಂದುಳಿದವರು ಪ್ರತಿಭಟಿಸುವರೆಂಬ ನಿರೀಕ್ಷೆ ಹುಸಿಯಾಗಿದೆ. ದೇಶಾದ್ಯಂತ ನೂರಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್ನ ಮುಂದಿವೆ. ಇದರಲ್ಲಿ ಒಂದು ದಾವೆಯು ಕರ್ನಾಟಕದ ಹಿಂದುಳಿದವರು ಪ್ರತಿನಿಧಿಸುತ್ತಿಲ್ಲ. ಮಾಜಿ ಮಂತ್ರಿ ರೇವಣ್ಣ, ಕಾಂತರಾಜು, ಸಿದ್ದರಾಜು ಅವರಂತಹವರು ಮಾತ್ರ ಸೆಡ್ಡು ಹೊಡೆದು ನಿಂತಿದ್ದಾರೆ. ಮೇಲ್ನೋಟಕ್ಕೆ ಮೇಲ್ವರ್ಗದ ಬಡಜನರಿಗೆ ನ್ಯಾಯ ಸಂದಿದೆ ಎಂದೆನಿಸಿದರೂ, ಮೀಸಲಾತಿಯ ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ಬಿದ್ದಿದೆ.
ಸಾಮಾಜಿಕವಾಗಿ ಹಿಂದುಳಿದವರೆಲ್ಲರಿಗೂ ಮೀಸಲಾತಿ ನೀಡಿದ ಮಾಜಿ ಪ್ರಧಾನಿ ವ್ಹಿ.ಪಿ.ಸಿಂಗ್ ಅವರನ್ನು ಅಂದು ಅವಕಾಶವಾದಿ ರಾಜಕಾರಣಿ ಎಂಬಂತೆ ಬಿಂಬಿಸಲಾಯಿತು. ಇಂದು ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಕಲ್ಪಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಗತಿಪರ ಎಂದು ಬಿಂಬಿಸಲಾಗಿದೆ. ವ್ಹಿ.ಪಿ.ಸಿಂಗ್ ಅವರು ತಮ್ಮ ರಾಜಕೀಯ ಪ್ರಾಮಾಣಿಕತೆ ಸಾಬೀತುಪಡಿಸಲು ಬೊಫೋರ್ಸ್ ಹಗರಣವನ್ನು ಹೊರಗೆಡಹಿದರು. ಹಾಗೆಯೇ ಸಾಮಾಜಿಕ ಬದ್ಧತೆ ಸಾಬೀತುಪಡಿಸಲು ಬಿ.ಡಿ. ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತಂದರು. 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವ್ಹಿ.ಪಿ.ಸಿಂಗ್ ಅವರು ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ರಾಷ್ಟ್ರೀಯ ರಂಗ ಕಟ್ಟಿ ಪ್ರಧಾನಿಯಾಗಿದ್ದರು. ಮೊದಲಿಗೆ ಕಮ್ಯೂನಿಸ್ಟ್ ಪಕ್ಷ ಮತ್ತು ಭಾಜಪ ಕೂಡ ರಾಷ್ಟ್ರೀಯ ರಂಗವನ್ನು ಬೆಂಬಲಿಸಿದ್ದವು.
ಸ್ವತಂತ್ರ ಭಾರತದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲಾಗುತ್ತಿತ್ತು. ಆದರಿಂದ ಪ್ರಧಾನಿ ಮೋದಿಯವರು ಶೇ.10ರಷ್ಟು ಮೀಸಲಾತಿಯನ್ನು ಬೆಳ್ಳಿ ತಟ್ಟೆಯಲ್ಲಿಟ್ಟು ಮೇಲ್ವರ್ಗದ ಬಡವರಿಗೆ ನೀಡಿದ್ದಾರೆ. ಇದರಿಂದ ಮೇಲ್ವರ್ಗದ ಬಡವರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರ ಮೀಸಲನ್ನು ಪಡೆಯಲಿದ್ದಾರೆ. ಬ್ರಾಹ್ಮಣರು, ಬನಿಯಾಗಳು, ಪಟೇಲರು, ಮರಾಠರು, ಗುಜ್ಜಾರರು, ಠಾಕೂರರು ಮೀಸಲು ಸೌಲಭ್ಯ ಪಡೆಯುವವರಿದ್ದಾರೆ. ಇತ್ತೀಚೆಗೆ ಸುಪ್ರಿಂ ಕೋರ್ಟ್ ಎಸ್.ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಕೆಲ ನಿಯಮಗಳನ್ನು ಸಡಿಲಗೊಳಿಸಿತ್ತು. ನಾವು ದಲಿತರ ಪರ ಇದ್ದೇವೆಂಬ ಸಂದೇಶ ನೀಡಲು ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಮತ್ತೆ ತಿದ್ದುಪಡಿ ಮಾಡಿತು. ಇದರಿಂದ ಸಹಜವಾಗಿ ಮೇಲ್ವರ್ಗಗಳು ಅಸಮಾಧಾನಗೊಂಡಿದ್ದವು. ಹೀಗೆ ಅಸಮಾಧಾನಗೊಂಡ ಹರಿಯಾಣದ ಜಾಟರನ್ನು, ಗುಜರಾತಿನ ಪಟೇಲರನ್ನು, ರಾಜಸ್ಥಾನದ ರಜಪೂತರನ್ನು ವಿರೋಧ ಪಕ್ಷಗಳು ಸೆಳೆಯಬಾರದು. ಅವರ ವಿಶ್ವಾಸ ಗಳಿಸಬಾರದು, ಇದಕ್ಕಾಗಿ ಮೇಲ್ವರ್ಗದವರನ್ನು ಸಂತೈಸಲು ಶೇ.10 ಮೀಸಲು ನೀಡಿ ಓಲೈಸಿ, ಆಂತರಿಕವಾಗಿ ಸಂಘ ಪರಿವಾರವನ್ನು ಸಂತುಷ್ಟಗೊಳಿಸಿದೆ.
ಇದು 2019ರ ಲೋಕಸಭಾ ಚುನಾವಣೆಗೆ ಮೋದಿ ನೀಡಿದ ಮಾಸ್ಟರ್ ಸ್ಟ್ರೋಕ್ ಎಂದೇ ಚರ್ಚೆಯಾಗುತ್ತಿದೆ. ಶೇ.10 ರ ಮೀಸಲು ಆರ್ಥಿಕವಾಗಿ ಹಿಂದುಳಿದವರಿಗಿಂತ ಬಲಿಷ್ಠರ ಪಾಲಾಗುವುದೇ ಹೆಚ್ಚು. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರ ಮೀಸಲು ಕೇಳಲು, ಹೇಳಲು ಸುಂದರವಾಗಿದೆ. ಇದು ನಿಜಕ್ಕೂ ಜಾರಿಯಾಗುವುದೇ? ಪ್ರಧಾನಿ ಮೋದಿ ಅವರು ಇಂತಹ ಮಸೂದೆಯನ್ನು ತಂದು ರಾಜಕಾರಣಿಗಳ ಕೈ ಬಾಯಿ ಕಟ್ಟಿ ಹಾಕಿದ್ದಾರೆ. ಎಂಐಎಂ ಪಕ್ಷ ಮತ್ತು ಡಿಎಂಕೆ ಪಕ್ಷ ಹೊರತುಪಡಿಸಿ ಉಳಿದ ಪಕ್ಷಗಳು ವಿರೋಧ ವ್ಯಕ್ತಪಡಿಸಿಲ್ಲ ಎಂಬುದೇ ಸೋಜಿಗದ ಸಂಗತಿ.
ಮಸೂದೆ ಅಂಗೀಕಾರವಾದ ನಂತರ ಬೆಂಗಳೂರು ಪ್ರೆಸ್ಕ್ಲಬ್ ನಡೆದ ವಿಚಾರ ಸಂಕಿರಣದಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಅವರು ಕೆಲ ನೈಜ ಪ್ರಶ್ನೆಗಳನ್ನು ಎತ್ತಿದ್ದಾರೆ. ದೇಶದಲ್ಲಿ ಮಹಾ ಚುನಾವಣೆಗೆ ಕೇವಲ 90 ದಿನಗಳ ಕಾಲಾವಕಾಶ ಇದೆ. ಹೀಗಿರುವಾಗ ಮೇಲ್ವರ್ಗದ ಬಡವರಿಗೆ ಶೇ.90 ರ ಮೀಸಲು ನೀಡುವಂತಹ ಪ್ರಮುಖ ನೀತಿಯನ್ನು ಜಾರಿಗೆ ತಂದಿರುವುದು ರಾಜಕೀಯ ಲಾಭಕ್ಕಾಗಿಯೇ? ಅಥವಾ ಬಡವರ ಬಗ್ಗೆ ಇರುವ ಕಾಳಜಿಯೇ? ಕಾಳಜಿ ಇದ್ದಲ್ಲಿ, ಮಸೂದೆಯ ಉದ್ದೇಶವನ್ನು ಸಾರ್ವಜನಿಕರ ಚರ್ಚೆಗೆ ಅವಕಾಶ ಮಾಡಿಕೊಡಬೇಕಿತ್ತು. ಬಹುಜನರ ಅಭಿಪ್ರಾಯಗಳಿಗೆ ಬೆಲೆ ನೀಡಬಹುದಿತ್ತು. ಇದನ್ನು ಬಿಟ್ಟು ತರಾತುರಿಯಲ್ಲಿ ಅಂದರೆ, ಮೊದಲ ದಿನ ರಾಜ್ಯಸಭೆಯಲ್ಲಿ, ಎರಡನೆ ದಿನ ಲೋಕಸಭೆಯಲ್ಲಿ, ಮೂರನೇ ದಿನ ರಾಷ್ಟ್ರಪತಿಗಳಿಂದ ಸಹಿ ಮಾಡಿಸಿ, ನಾಲ್ಕನೇ ದಿನಕ್ಕೆ ಗುಜರಾತ್ನಲ್ಲಿ ಮಸೂದೆ ಜಾರಿಗೊಳಿಸಲಾಗಿದೆ.
ಶತ ಶತಮಾನಗಳಿಂದ ತುಳಿತಕ್ಕೆ ಒಳಗಾದವರಿಗೆ ಜಾತಿ ಆಧಾರದ ಮೇಲೆ ಅನ್ಯಾಯಕ್ಕೆ ಒಳಗಾದವರಿಗೆ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂಬುದು ಸಂವಿಧಾನದ ಮೂಲ ಆಶಯ. ಇಂಥದ್ದರಲ್ಲಿ ಆರ್ಥಿಕ ಮಾನದಂಡ ಇಟ್ಟುಕೊಂಡು ಮೀಸಲು ಕಲ್ಪಿಸುತ್ತಿರುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುವುದಿಲ್ಲವೇ? ಜಾತಿ ಆಧಾರಿತ ಮೀಸಲಾತಿಯಿಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನುಕೂಲವಾಗುತ್ತಿರಲಿಲ್ಲ. ಇದೀಗ ತಂದಿರುವ ತಿದ್ದುಪಡಿಯಿಂದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿರುವ ಬಡವರಿಗೂ ಅನುಕೂಲವಾಗುತ್ತದೆ ಎಂಬ ವಾದವನ್ನು ಇಡಲಾಗಿದೆ. ಧರ್ಮವೊಂದನ್ನು ಆಧರಿಸಿ ಮೀಸಲು ನೀಡುವುದು ಅಸಂವಿಧಾನಿಕ ಎನಿಸುವುದಿಲ್ಲವೇ? ಶೇ.10 ಜಾತಿರಹಿತ ಮೀಸಲು ನ್ಯಾಯಾಲಯದಲ್ಲಿಯೂ ಗೆದ್ದು ಬಂದುಬಿಟ್ಟರೆ ಹಿಂದುಳಿದ ವರ್ಗಗಳು ಎಸ್.ಸಿ, ಎಸ್.ಟಿಗಳು ನಿಗದಿಪಡಿಸಿರುವ ಕೆನೆಪದರ ನೀತಿಯನ್ನು ತೆಗೆದುಹಾಕಲು ಒತ್ತಾಯಿಸಬಹುದು. ಆಗ ಮತ್ತೊಂದು ರೀತಿಯ ಸವಾಲು, ಸಮಸ್ಯೆಗಳು ಎದುರಾಗುವುದಿಲ್ಲವೇ?










