ಭಾಗ-೧
ಡಾ.ಎಂ.ಎಸ್.ಮಣಿ
ಕೆಲವು ಪ್ರಕರಣಗಳು, ಹೇಳಿಕೆಗಳು ಮೌನದಿಂದಿರಲು ಬಿಡುವುದೇ ಇಲ್ಲ. ಅವನ್ನು ಜಾಲಾಡಿಸಿ ವಿಚಾರ ಮಂಥನ ಮಾಡಿ ನಿಮ್ಮ ಮುಂದಿಡದಿದ್ದಲ್ಲಿ ನಿದ್ದೆಯೇ ಹತ್ತುವುದಿಲ್ಲ. ಚಂದ್ರಾ ಲೇಔಟ್ನಲ್ಲಿರುವ ಅತ್ತಿಗುಪ್ಪೆ ವಾರ್ಡ್ನ ಇಂದಿರಾ ಕ್ಯಾಂಟಿನ್ಗೆ ಕೆಲವರು ಕಲ್ಲು ಹೊಡೆದಿದ್ದರು. ಪಡಿತರ ವ್ಯವಸ್ಥೆಯಡಿ ನೀಡಲಾಗುವ ಉಚಿತ ಅಕ್ಕಿಯನ್ನು ಸಮಾಜದ ಎಲ್ಲಾ ವರ್ಗದವರಿಗೂ ನೀಡಬಾರದೆಂದು ಮದ್ರಾಸ್ ಹೈಕೋರ್ಟು ಪ್ರಕರಣವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ಒಂದೊತ್ತಿನ ಊಟಕ್ಕೆ ಅಕ್ಕಿ, ನೂರು ಗ್ರಾಂ ದನಿಯಾ ಪುಡಿ ಕದ್ದನೆಂದು ಪಾಲಕ್ಕಾಡ್ನ ಮಧು ಎಂಬ ಕುರಿಗಾರನನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಕೌಟಂದ ಗ್ರಾಮದ ಆರು ವರ್ಷದ ಸೈಫ್ ಎರಡು ಸಮೋಸಾ ತರುವಾಗ ಹಸಿವು ತಾಳಲಾರದೆ ಒಂದನ್ನು ತಿಂದಿದ್ದಾನೆ. ಇಷ್ಟಕ್ಕೆ ಮಲತಾಯಿ ತಬಸಮ್ ಕತ್ತುಹಿಸುಕಿ ಸೈಫ್ನನ್ನು ಕೊಂದೇ ಹಾಕಿದ್ದಾಳೆ.
ಬಿಹಾರದ ಸಹರ್ಸಾ ಜಿಲ್ಲೆಯ ಬನಾಹಿತೋಲಾ ಗ್ರಾಮಸ್ಥರು ಬದುಕುಳಿಯಲು ಬಹುದಿನಗಳವರೆಗೂ ಇಲಿಯನ್ನೇ ತಿಂದು ಜೀವವುಳಿಸಿಕೊಂಡಿದ್ದಾರೆ. ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ನಾರಾಯಣ, ಸುಬ್ಬು ಮತ್ತು ವೆಂಕಟರಾಮು ೨೦೧೭ ರಲ್ಲಿ ಹಸಿವು ತಡೆಯಲಾಗದೆ ಅಸುನೀಗಿದ್ದಾರೆ. ಚತ್ತೀಸ್ಗಡದ ಗೊಂದ್ವಾರದಲ್ಲಿ ೧೨ ವರ್ಷದ ಮನೆಗೆಲಸದಾಕೆ ಆರತಿಯನ್ನು ಕಳ್ಳಿ ಎಂದು ಆಶಾ ಜೈಸ್ವಾಲ್ ಜೀವಂತವಾಗಿ ದಹಿಸಿ ಹಾಕಿದ್ದಾಳೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಡೀಸೆಲ್ ಕಳ್ಳರೆಂದು ಅಶಿಶ್ಗೊಂಡ್, ಸುರೇಶ್ ಠಾಕೂರ್, ಗೋಲು ಠಾಕೂರ್ ಅವರುಗಳನ್ನು ನಗ್ನಗೊಳಿಸಿ ಥಳಿಸಿದ್ದಾರೆ.
ಈ ಪ್ರಕರಣಗಳನ್ನೆಲ್ಲಾ ಅಣಕಿಸುವಂತೆ, ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಸಮೋಸ, ಗುಲಾಬ್ ಜಾಮೂನ್ ಮತ್ತು ಚಹಾ ಕುಡಿಯಲು ೯ ಕೋಟಿ ವ್ಯಯಿಸಿದೆ. ೯ ಸಾವಿರ ಕೋಟಿ ರೂಪಾಯಿಗಳೊಂದಿಗೆ ದೇಶಬಿಟ್ಟು ಪರಾರಿಯಾದ ಮಲ್ಯ, ಬ್ರಿಟನ್ನಲ್ಲಿ ೫೨ಕೋಟಿ ಮೊತ್ತದ ಮನೆ ಹೊಂದಿದ್ದಾನೆ. ಶೌಚಾಲಯಕ್ಕೆ ಚಿನ್ನದ ಮುಚ್ಚಳ ಹಾಕಿಸಿದ್ದಾನೆ. ಬಾಬಾ ಸುಧೀರ್ ಮಕ್ಕರ್ ಎಂಬ ಸ್ವಾಮೀಜಿ ದೇಹದ ಮೇಲೆ ೨೦ ಕೆ.ಜಿ ಬಂಗಾರ, ಕೈಗೆ ೨೭ ಲಕ್ಷ ಮೌಲ್ಯದ ರೊಲೆಕ್ಸ್ ವಾಚ್, ಓಡಾಡಲು ಹಮ್ಮರ್, ಜಾಗ್ವಾರ್, ಲ್ಯಾಂಡ್ ರೋವರ್, ಬಿಎಂ.ಡಬ್ಲ್ಯೂ, ಆಡಿ ಕಾರುಗಳನ್ನು ಹೊಂದಿದ್ದಾನೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ೩ ವರ್ಷದ ಮೊಮ್ಮಗ ದೇವಾಂಶ ೧೮.೭೧ ಕೋಟಿ ಆಸ್ತಿ ಹೊಂದಿದ್ದಾನೆ. ಅಂದರೆ, ತನ್ನ ತಾತನಿಗಿಂತ ೬ಪಟ್ಟು ಅಧಿಕ ಧನಿಕ. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ, ಸಾಯಂಕಾಲ ತಂಗಳು ಊಟ, ಶಾಲೆಯ ಅವಧಿಯಲ್ಲಿ ಎಲ್ಲರಿಗೂ ನಿದ್ದೆ ವ್ಯವಸ್ಥೆ ಮಾಡುತ್ತಿದೆ ಎಂದು ಗೋಷ್ಠಿಯೊಂದರಲ್ಲಿ ವಿದ್ವಾನ್ ಉಮಾಕಾಂತ್ ಭಟ್ ವ್ಯಂಗ್ಯವಾಡಿದ್ದರು.
ನನಗಾಗ ನನ್ನ ಬಾಲ್ಯದ ನೆನಪಾಯಿತು. ಹಸಿವಿನಿಂದ ಅಸುನೀಗಿದವರು ಕೂಡ ಕಾಡಲಾರಂಭಿಸಿದರು. ಅದು ೭೦ರ ದಶಕ. ನಾನಾಗ ಪ್ರಾಥಮಿಕ ತರಗತಿಯಲ್ಲಿದ್ದೆ. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಹಸಿವಿನ ನಂಟಿತ್ತು. ಬೋಟಿ ತಯಾರಿಕೆ ಕೇಂದ್ರ ಒಂದು ಶಾಲೆಯ ಹಾದಿಯಲ್ಲಿತ್ತು. ನನ್ನ ದೊಡ್ಡಪ್ಪ ಪ್ರತಿದಿನ ಒಂದು ಪೈಸೆ ಕೊಡುತ್ತಿದ್ದರು. ಅದರಲ್ಲಿ ಮುರಿದುಹೋದ ಬೋಟಿಯ ತುಣುಕುಗಳನ್ನು ಖರೀದಿಸಿ ಶಾಲೆಯಲ್ಲಿ ಕೂತು ತಿನ್ನುತ್ತಿದ್ದೆ. ಹಳೆಯ ಪ್ಯಾಂಟಿನ ಕಾಲು ಭಾಗ ಕತ್ತರಿಸಿ ಮಾಡಿದ್ದ ಬ್ಯಾಗೇ ನನಗೆ ತುತ್ತಿನ ಚೀಲವೂ ಆಗಿತ್ತು. ಬೋಟಿಗೆ ಹದವಾದ ಉಪ್ಪು ಮತ್ತು ಮೆಣಸಿನ ಪುಡಿ ಬೆರೆಸಿದ್ದರಿಂದ, ಹೊಟ್ಟೆ ತುಂಬಾ ನೀರು ಕುಡಿದು ಮಧ್ಯಾಹ್ನದ ಊಟ ಮುಗಿಸಿಕೊಳ್ಳುತ್ತಿದ್ದೆ. ಇದೇ ಕಾರಣಕ್ಕಾಗಿ ನಾನಿಂದು ಅಪೌಷ್ಠಿಕತೆಗೂ ಒಳಗಾಗಿರುವೆ. ಹೀಗೆ ದಿನಗಳು ಉರುಳುತ್ತಿದ್ದಂತೆ ಶಾಲೆಯಲ್ಲಿ ಬಿಸಿ ಉಪ್ಪಿಟ್ಟು ಕೊಡುವ ಪರಿಪಾಠ ಬಂತು. ಇಂತಹದ್ದೊಂದು ಯೋಜನೆ ನನಗೆ ಮಾತ್ರವಲ್ಲ, ಕೊಟ್ಯಾಂತರ ಜನರಿಗೆ ಸಂಜೀವಿನಿ ದೊರಕಿದಂತಾಗಿತ್ತು. ಉಪ್ಪಿಟ್ಟಿನಲ್ಲಿ ಹುಳು ಇವೆ. ಹದವಾಗಿ ಬೆಂದಿರುವುದಿಲ್ಲ ಎಂಬ ಕಾರಣಕ್ಕೆ ಅನುಕೂಲಸ್ಥರು ತಿನ್ನುತ್ತಿರಲಿಲ್ಲ. ಹೀಗಾಗಿ ನನಗೆ ಹೊಟ್ಟೆ ಬಿರಿಯುವಷ್ಟು ಸಿಗುತ್ತಿತ್ತು. ನನ್ನಂತಹ ತಂದೆ ಇಲ್ಲದ ತಬ್ಬಲಿಗಳ ನೆರವಿಗಾಗಿ ಯೋಜನೆ ರೂಪಿಸಿದವರು ಭಾರತ ರತ್ನ ಕಾಮರಾಜ್ ಆಗಿದ್ದರು. ೧೯೯೦ರ ದಶಕದ ಅಂತ್ಯದಲ್ಲಿ ವಿಶ್ವನಾಥ್ ಅವರು ಶಿಕ್ಷಣ ಸಚಿವರಾಗಿದ್ದಾಗ ಬಿಸಿಯೂಟದ ಯೋಜನೆ ತಂದರು. ೨೦೧೫ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ತೆರೆದರು. ಇದು ಕಟು ಟೀಕೆಗೆ ಒಳಗಾಯಿತು. ಜನ ಕೂಡ ಅನ್ನಕೊಟ್ಟ ಸಿದ್ದರಾಮಯ್ಯನನ್ನು ಮತ ನೀಡುವಾಗ ಕೈಹಿಡಿಯಲಿಲ್ಲ.
ಇರಲಿ, ಅನ್ನದ ಗಂಜಿ, ವಾರನ್ನ, ಬಿಸಿ ಉಪ್ಪಿಟ್ಟು ಇದ್ಯಾವುದೂ ನನ್ನ ಒಡಲು ಸೇರದಿದ್ದಲ್ಲಿ ’ಹಸಿವಿನ ಅರಿವೇ’ ಇರುತ್ತಿರಲಿಲ್ಲ. ನಿಮ್ಮೊಂದಿಗೆ ಸಂವಹಿಸಲು ಸಾಧ್ಯವಾಗುತ್ತಲೂ ಇರಲಿಲ್ಲ. ಹೀಗಾಗಿಯೇ ನನಗೆ ನನ್ನ ದೇಶ ಹಸಿವುಮುಕ್ತ ಆಗಬೇಕೆಂಬ ಬಯಕೆ ಇದೆ. ಮನುಜರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಕೂಡ ಹಸಿವಿನಿಂದ ಅಸುನೀಗಬಾರದೆಂಬ ಕಳಕಳಿ ಮತ್ತು ಕಾಳಜಿ ಇದೆ. ಇತ್ತೀಚೆಗೆ ನಮ್ಮ ಪ್ರಧಾನಿ, ಪೀಡಕ ಪಾಕ್ನ್ನು ಭಿಕ್ಷೆ ಬೇಡುವ ದೇಶ ಎಂದು ಜರಿದರು. ನನಗಾಗ ಶಿಖಾ, ಮಾನಸಿ, ಪಾರುಲ್ ಎಂಬ ಬಾಲಕಿಯರು ಯಾರೆಂದು ನಮ್ಮ ಪ್ರಧಾನಿಗಳನ್ನು ಪ್ರಶ್ನಿಸಬೇಕೆನಿಸಿತು. ಪ್ರಧಾನಿಗಳಿಗಿರಲಿ, ನಮ್ಮ ದೇಶದ ೧೩೦ ಕೋಟಿ ಜನರಲ್ಲಿ ಶೇಕಡ ೫ರಷ್ಟು ಜನರಿಗೂ ಶೀಖಾ, ಮಾನಸಿ, ಪಾರುಲ್ ಯಾರೆಂಬುದು ಗೊತ್ತಿರಲಿಕ್ಕಿಲ್ಲ.
ಹೌದು, ಇಲ್ಲಿ ಏನಿದ್ದರೂ ಸಿನಿಮಾ ನಟರಿಗೆ, ರಾಜಕಾರಣಿಗಳಿಗೆ, ಕ್ರೀಡಾಪಟುಗಳಿಗೆ, ಕೋಟಿಗಟ್ಟಲೆ ಲೂಟಿ ಮಾಡುವ ಕಳ್ಳರಿಗೆ ಗುರುತರ ಅಪರಾಧ ಎಸಗುವ ಅಪರಾಧಿಗಳನ್ನಷ್ಟೇ ಗುರುತಿಸುತ್ತಾರೆ, ಗೌರವಿಸುತ್ತಾರೆ. ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಇಲ್ಲಿ ಬೆಲೆಯೇ ಇಲ್ಲ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾದಲ್ಲಿ ಇವೆಲ್ಲವೂ ಸಾಮಾನ್ಯದ ಸಂಗತಿ. ಮಾಧ್ಯಮ ಕೂಡ ಬಡವರ ಸುದ್ದಿಯನ್ನು ಅಂದಿನ ಟಿಆರ್ಪಿಗೆ ಬಳಸಿ ಬಿಸಾಡುತ್ತದೆ. ಮತ್ತೇನಾಯಿತೆಂಬ ಗೊಡವೆಗೆ ಹೋಗುವುದೇ ಇಲ್ಲ. ಇಷ್ಟೆಲ್ಲಾ ನೋವಿನಿಂದ ತೋಡಿಕೊಳ್ಳಲು ಕಾರಣ, ಹಸಿವಿನ ಸಾವು. ನಾನಿದನ್ನು ’ಹಸಿವಿನ ಹತ್ಯೆ’ ಎಂದೇ ಸಂಬೋಧಿಸುತ್ತೇನೆ.
ದೇಶದ ರಾಜಧಾನಿ ದೆಹಲಿಯ ಮಂಡವಾಲಿ ಪ್ರದೇಶದಲ್ಲಿ ತುತ್ತು ಅನ್ನವೂ ದೊರಕದೆ ಶಿಖಾ, ಮಾನಸಿ, ಫಾರುಲ್ ಕಳೆದ ವರ್ಷ ಅಸುನೀಗಿದ್ದರು. ಇವರುಗಳ ದೇಹದಿಂದ ಉಸಿರು ಹೋಗುವಾಗ ಒಂದು ತುತ್ತು ಅನ್ನವೂ ಇವರ ಹೊಟ್ಟೆಯಲ್ಲಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ಉಸಿರಾಡಿ, ಪ್ರಾಣ ಬಿಟ್ಟಿದ್ದಾರೆ. ಹಲವು ದಿನಗಳಿಂದ ಇವರ ಹೊಟ್ಟೆ ಆಹಾರವನ್ನೇ ಕಂಡಿರುವುದಿಲ್ಲವೆಂಬ ಭಯಾನಕ ಸತ್ಯವನ್ನು ಪೋಸ್ಟ್ ಮಾರ್ಟಮ್ ವರದಿ ಹೊರಹಾಕಿದೆ. ಪಾಪದ ಮಕ್ಕಳು ಹಸಿವೆಂಬ ಅರ್ಥವೂ ಗೊತ್ತಿಲ್ಲದೆ ಬಲಿಯಾಗಿರುವುದು ಗಾಬರಿ ಮೂಡಿಸುತ್ತದೆ.
ಪಶ್ಚಿಮ ಮಿಡ್ನಾಪುರದ ಅಮ್ಲಾಸೋಲೆಯಲ್ಲಿ ಏಳು ಮಂದಿ ಆದಿವಾಸಿ ಸಬರ್ ಸಮುದಾಯದವರು ಕೂಡ ಹಸಿವಿನಿಂದ ಅಸುನೀಗಿದ್ದಾರೆ. ಅಲ್ಲಿ ವಿಧಾನಸಭೆಯಲ್ಲಿ ’ಹಸಿವಿನ ಸಾವು’ ಕುರಿತಂತೆ ಚರ್ಚೆಯಾಗಿ ಮಾರಾಮಾರಿಯೇ ನಡೆದಿದೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರ್ಕಾರ ಕೊಲ್ಕತ್ತಾ ನಗರದ ಹೊರವಲಯದಲ್ಲಿ ’ಆಹಾರ ಬೆಂಗ್ಲಾ’ ಎಂಬ ಆಹಾರ ಮೇಳವನ್ನೇ ಆಯೋಜಿಸಿತ್ತು. ಒಂದೆಡೆ ಹಸಿವಿನ ನರ್ತನವಾದರೆ ಇನ್ನೊಂದೆಡೆ ಸರ್ಕಾರಿ ಪ್ರಾಯೋಜಿತ ’ಆಹಾರ ಮೇಳ’ದ ಮೆರವಣಿಗೆ ನಡೆದಿತ್ತು. ಮಮತಾ ಬ್ಯಾನರ್ಜಿಯವರು ’ಹಸಿವಿನ ಸಾವು’ ವಯೋ ಸಹಜ ಆರೋಗ್ಯದ ಸಮಸ್ಯೆಗಳು ಮತ್ತು ಅತಿಯಾದ ಮದ್ಯಸೇವನೆಯಿಂದ ಆಗಿವೆ ಎಂದು ತಿಪ್ಪೆ ಸಾರಿಸಿದರು. ಪಶ್ಚಿಮ ಬಂಗಾಳದ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಬಿಮನ್ ಬೋಸ್ ’ಹಸಿವು’ ಮತ್ತು ’ಅಪೌಷ್ಠಿಕತೆ’ ನಡುವಿನ ವ್ಯತ್ಯಾಸವನ್ನು ಆಮ್ಲಾಸೋಲೆ ದುರ್ಘಟನೆ ನಂತರ ನೀಡಿದರು. ’ಹಸಿವಿನ ಸಾವು’ ಆಮ್ಲಸೋಲೆ ಮತ್ತು ಲಾಲ್ಘರ್ ದುರ್ಘಟನೆಗೆ ಕಾರಣವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಇವರಿಬ್ಬರೂ ಹರ ಸಾಹಸಪಟ್ಟಿದ್ದರು.
ಜಾರ್ಖಂಡ್ನಲ್ಲಿ ೧೧ ವರ್ಷದ ಬಾಲಕಿ ಅನ್ನ, ಅನ್ನ ಎಂದು ಗೋಗರೆದು ಹಸಿವಿನಿಂದ ಸಾವನ್ನಪ್ಪಿದ್ದಾಳೆ. ನತದೃಷ್ಟೆಯ ಕುಟುಂಬ ಕೂಡ ಹಸಿವಿನಿಂದ ಕಂಗೆಟ್ಟು ನೆರಳಿದೆ. ಧನಬಾದ್ ಸಿಟಿಯಲ್ಲಿ ಆಟೊರಿಕ್ಷಾ ಓಡಿಸುವ ಡ್ರೈವರ್ ಕುಟುಂಬ ಇವರದ್ದಾಗಿದೆ. ಮನೆಯ ಹಿರೀಕನ ಅಗಲಿಕೆಯಿಂದ, ಅವನೊಂದಿಗೆ ಪಡಿತರ ಚೀಟಿ ಕೂಡ ಕಣ್ಮರೆಯಾಗಿದೆ. ಪಡಿತರ ಚೀಟಿ ಇಲ್ಲದಿದ್ದರಿಂದ ಪಡಿತರ ಸಿಕ್ಕಿರಲಿಲ್ಲ. ಇದೇ ರೀತಿ ಉತ್ತರಪ್ರದೇಶದ ಬರೈಲಿಯಲ್ಲಿ ಹಸಿವಿನಿಂದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ. ಕಾರಣ ಈಕೆ ಸಕಾಲಕ್ಕೆ ಪಡಿತರ ಅಂಗಡಿಗೆ ತೆರಳಿ ಹೆಬ್ಬೆಟ್ಟು ಒತ್ತಿರಲಿಲ್ಲ. ಮೇಲಿನ ಎಲ್ಲಾ ಪ್ರಕರಣಗಳು ಮಾಧ್ಯಮದ ಎಡಬಿಡದ ಪ್ರಸಾರದಿಂದ ’ಹಸಿವಿನ ಸಾವು’ ಕುರಿತಂತೆ ಗೊತ್ತಾಗಿದೆ. ಆದರಿಲ್ಲಿ ಕೂಡ ಮಾಧ್ಯಮಗಳು ಹಸಿವಿನಿಂದ ಸತ್ತವರ ಸಂಪೂರ್ಣ ವರದಿಯನ್ನು ಕೊಟ್ಟಿಲ್ಲ. ಇನ್ನೊಂದು ಸ್ಕೂಪ್ ಸಿಕ್ಕೊಡನೆ, ಹಸಿವಿನ ಸಾವಿನ ವರದಿಯನ್ನು ಅಷ್ಟಕ್ಕೆ ನಿಲ್ಲಿಸಿಬಿಟ್ಟಿದೆ.
ಹೀಗೆ ಹಸಿವಿನಿಂದ ಯಾರೂ ಸಾಯಬಾರದು. ಖಾಲಿ ಹೊಟ್ಟೆಯಲ್ಲಿ ಯಾರೂ ಉಸಿರಾಡಬಾರದೆಂಬುದು ನನ್ನ ಪ್ರಬಲ ಅನಿಸಿಕೆ. ಅದೇಕೋ ಶಿಖಾ, ಮಾನಸಿ, ಪಾರುಲ್, ಆಮ್ಲಾಸೋಲೆಯ ಏಳು ಜನ ಆದಿವಾಸಿಗಳನ್ನು, ಜಾರ್ಖಂಡ್ ನ ೧೧ ವರ್ಷದ ಬಾಲಕಿಯನ್ನು ನೆನಪಿಸಿಕೊಂಡರೆ ಮೈಯೆಲ್ಲಾ ಕಂಪಿಸುತ್ತದೆ. ಇದೇನಾ ನನ್ನ ಭಾರತ. ಅಯ್ಯೋ ಎಂದು ಕಿರುಚಬೇಕೆನಿಸುತ್ತದೆ.
ಶಿಖಾ, ಮಾನಸಿ, ಪಾರುಲ್ ಹಸಿವಿನಿಂದ ಪ್ರಾಣ ತ್ಯಜಿಸುವಾಗ ಅವರ ತಂದೆತಾಯಿ ಏನು ಮಾಡುತ್ತಿದ್ದರೆಂಬ ಪ್ರಶ್ನೆ ಮೂಡುವುದು ಸಹಜ. ಇವರು ಮೂಲತಃ ಪಶ್ಚಿಮ ಬಂಗಾಳದವರು. ತಾಯಿ ಮಾನಸಿಕ ಅಸ್ವಸ್ಥೆ. ಅಲ್ಲದೇ, ದೆಹಲಿಯಂತಹ ನಗರದಲ್ಲಿ ಮಾತನಾಡಲು ಬೇಕಿರುವ ಭಾಷೆಯ ಅರಿವು ಇರಲಿಲ್ಲ. ತಂದೆ ಮಂಗಲ್, ಉದ್ಯೋಗ ಅರಸಿ ದೆಹಲಿಗೆ ಬಂದು ಬೀದಿಬೀದಿ ಅಲೆದಿದ್ದರು. ಮೊದಲಿಗೆ ರಿಕ್ಷಾ ಓಡಿಸುತ್ತಿದ್ದ ಮಂಗಲ್ನನ್ನು ಗೂಂಡಾಗಳು ಬೆದರಿಸಿ, ರಿಕ್ಷಾವನ್ನು ಹೊತ್ತೊಯ್ದರು. ಸಂಪಾದನೆಯ ಮೂಲಕ್ಕೆ ಕೊಡಲಿಪೆಟ್ಟು ಬಿದ್ದಿದ್ದರಿಂದ ರಿಕ್ಷಾ ಮಾಲೀಕರಿಗೆ ಹಣ ನೀಡಲು ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಮನೆಯ ಮಾಲೀಕ ಬಾಡಿಗೆ ಹಣಕ್ಕಾಗಿ ಕೊಡಬಾರದ ಕಾಟ ಕೊಟ್ಟು ಹೊರದಬ್ಬಿದ್ದನು.
ದೇಶದ ರಾಜಧಾನಿ ದೆಹಲಿಯಲ್ಲೇ ಇಂತಹದೊಂದು ಮರಣ ಭೀಕರ ಘಟನೆ ನಡೆದ ನಂತರ ದೆಹಲಿಯ ಮೇಲಿನ ಮೋಹ ಕರಗಿಹೋಯಿತು. ದೇಶದ ಜನರನ್ನು ದೆಹಲಿ ಕಾಪಾಡುತ್ತದೆ ಎಂಬುದು ಶುದ್ಧ ಸುಳ್ಳೆಂಬುದು ಮನವರಿಕೆಯಾಯಿತು. ನೆರೆಯ ದೇಶವನ್ನು ಭಿಕ್ಷುಕರ ದೇಶ ಎಂದು ಜರೆದಿದ್ದನ್ನು ನೆನೆದು ನಗುಬಾರದ ರಂಧ್ರಗಳಲೆಲ್ಲಾ ನಗು ಉಕ್ಕಿ ಬಂತು. ಜಗತ್ತಿನ ಆರನೇ ದೊಡ್ಡ ಆರ್ಥಿಕತೆಯ ದೇಶ ನಮ್ಮದೆಂದು ಅದ್ಯಾವ ಪುಣ್ಯಾತ್ಮ ಹೇಳಿದನೋ ಎಂದು ಶಪಿಸುವಂತಾಯಿತು. ದೆಹಲಿಯಂತಹ ನಗರದಲ್ಲಂತೂ ’ಹಸಿವಿನ ಸಾವು’ ಸಂಭವಿಸಲೇಬಾರದು. ಸಂಭವಿಸಿರುವುದು ಆಡಳಿತದ ವೈಫಲ್ಯವನ್ನು ತೋರುತ್ತದೆ. ಪ್ರಧಾನಿ ಕುರ್ಚಿಗೆ ಟವೆಲ್ ಹಾಕಿ ಕೂತಿರುವ ಮಮತಾ ಬ್ಯಾನರ್ಜಿ ಅವರ ಆಡಳಿತದ ವೈಫಲ್ಯವನ್ನು ತೋರಿಸಿದೆ.
ಕೆಲವು ಸಂಸತ್ ಸದಸ್ಯರು ಸಂಸತ್ತಿನಲ್ಲಿ ಧ್ವನಿ ಎತ್ತಿದರಾದರೂ, ಅದನ್ನು ರಾಜಕೀಯ ಸ್ವರೂಪಕ್ಕೆ ಪರಿವರ್ತಿಸಿ ಚರ್ಚೆಯಲ್ಲಿಯೇ ಮುಕ್ತಾಯಗೊಳಿಸಿಬಿಟ್ಟರು. ’ಹಸಿವಿನ ಸಾವನ್ನು’ ವಸ್ತುನಿಷ್ಠವಾಗಿ ಕಾಣಬಹುದೆಂಬ ನನ್ನಂತಹವರ ತವಕ ಹಾಗೆಯೇ ಉಳಿದು ಬಿಟ್ಟಿತು. ’ಹಸಿವಿನ ಸಾವಿಗೆ’ ಒಳಗಾದ ಬಾಲಕಿಯರು, ಆದಿವಾಸಿಗಳು ನಮ್ಮ ದೇಶದವರಾದ್ದರಿಂದ ಸಂಸತ್ತು ಅಷ್ಟೊಂದು ಗಂಭೀರವಾಗಿ ಚರ್ಚಿಸಿದಂತಿಲ್ಲ. ಹಸಿವಿನಿಂದ ಸತ್ತ ಬಾಲಕಿಯರ ದೇಹವನ್ನು ಪೋಸ್ಟ್ಮಾರ್ಟಂ ಮಾಡಿದ ವೈದ್ಯರೇ ದಂಗಾಗಿದ್ದಾರೆ. ಕಾರಣ, ಬಾಲಕಿಯರ ದೇಹದೊಳಗಿನ ಕೊಬ್ಬಿನ ಅಂಶ ಶೂನ್ಯ ಪ್ರಮಾಣದಲ್ಲಿತ್ತು. ಹಲವು ದಿನಗಳಿಂದ ಅನ್ನವನ್ನೇ ಕಾಣದ ದೇಹದಲ್ಲಿ ಇದ್ದ ಕೊಬ್ಬೆಲ್ಲವೂ ಕರಗಿ ಹೋಗಿತ್ತು. ನತದೃಷ್ಟ ಬಾಲಕಿಯರು ಕೋಮಾಗೆ ತೆರಳಿ ಅಸು ನೀಗಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಬಾಲಕಿಯರ ದೇಹದ ಮೂಳೆ, ಚರ್ಮವನ್ನು ಕಿತ್ತು ಹೊರಬರುವಂತಿದ್ದವು. ಹಣ್ಣು-ಹಾಲು, ಬೂಸ್ಟ್, ಹಾರ್ಲಿಕ್ಸ್ ತಿಂದುಂಡು ಬೆಳೆಯಬೇಕಾದ ಮಕ್ಕಳಿಗೆ ಅನ್ನ ಬೇಡ, ಕುಡಿಯಲು ಗಂಜಿ ಸಿಕ್ಕಿದ್ದರೂ ಬದುಕುಳಿಯುತ್ತಿದ್ದರು. ಹಾಲುಗಲ್ಲದ ಎರಡು, ನಾಲ್ಕು, ಎಂಟು, ಹನ್ನೊಂದು ವರ್ಷದ ಮಕ್ಕಳು ಇಷ್ಟೊಂದು ದುರಂತವಾಗಿ ಅಂತ್ಯವಾಗಬೇಕಿತ್ತೇ? ಎಂಬ ಪ್ರಶ್ನೆ ಎಡಬಿಡದೆ ಕಾಡುತ್ತದೆ. ಶಿಖಾ, ಮಾನಸಿ, ಪಾರುಲ್ ಹಸಿವಿನಿಂದ ಸತ್ತರೆಂದು ತಿಳಿದಿದ್ದೇ ಮಂಗಲ್ ತಲೆಮರೆಸಿಕೊಂಡಿದ್ದಾನೆ. ಅನುಮಾನಾಸ್ಪದವಾಗಿ ಕಂಡ ಪೊಲೀಸರು ಮರುಪರೀಕ್ಷೆಗೆ ಒಳಪಡಿಸಿದ್ದಾರೆ. ಇದಕ್ಕೆ ಯಾರದ್ದೂ ತಕರಾರಿಲ್ಲ. ಆದರೆ ಮಂಗಲ್ ಕುಟುಂಬ ಅನ್ನ ಹಾಕುತ್ತಿದ್ದ ರಿಕ್ಷವನ್ನು ಕದ್ದ ಕಳ್ಳರನ್ನೇ ಹಸಿವಿನ ಸಾವಿಗೆ ಕಾರಣಕರ್ತರೆಂದು ಶಿಕ್ಷಿಸಬೇಕು. ಜೊತೆಗೆ ಮಂಗಲ್ಗೆ ಮಾದಕ ವಸ್ತು ನೀಡಿದವರನ್ನು ಪತ್ತೆಹಚ್ಚಿ ಬಾಲಕಿಯರ ಸಾವಿಗೆ ಕಾರಣಕರ್ತರೆಂದು ಜೀವಾವಧಿ ಶಿಕ್ಷೆ ನೀಡಬೇಕು. ಕಾರಣ, ಬಡತನ ಜನರನ್ನು ಹಲವು ಮಾದರಿಯಲ್ಲಿ ಕೊಲ್ಲುತ್ತದೆ. ಅದರಲ್ಲೂ ಕಡು ಬಡತನ ಮಾದಕ ವ್ಯಸನಿಯನ್ನಾಗಿಸಿ ಬಿಡುತ್ತದೆ.










