ಚಿಕ್ಕಮಗಳೂರು – ದೇಶದ ಆರ್ಥಿಕ ವ್ಯವಸ್ಥೆಯನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ|| ಜೆ.ಮಾದೇಗೌಡ ಸಲಹೆ ಮಾಡಿದರು.ನಗರದ ಐಡಿಎಸ್‍ಜಿ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಹಾಗೂ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಶನಿವಾರ ಏರ್ಪಡಿಸಿದ್ದ ಭಾರತದ ಹಣಕಾಸು ಕ್ಷೇತ್ರದ ಸಮಗ್ರ ಸುಧಾರಣೆಗಳು ವಿಷಯ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ಯಾಂಕುಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಅವು ಸಧೃಡವಾಗಿದ್ದರೆ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರುತ್ತದೆ ಎಂದ ಅವರು ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಕಡಿಮೆಯಾಗುತ್ತಿದ್ದು, ಅನುತ್ಪಾದಕ ಆಸ್ತಿ ಜಾಸ್ತಿಯಾಗುತ್ತಿದೆ ಇದರಿಂದಾಗಿ ಬ್ಯಾಂಕುಗಳು ಬಲಹೀನಗೊಳ್ಳುತ್ತಿವೆ ಎಂದು ವಿಷಾದಿಸಿದರು.
ಆರ್ಥಿಕ ನಷ್ಟ ಅನುಭವಿಸಿದವರು ಸಾಲ ಮರುಪಾವತಿಸುವುದು ದುಸ್ತರವಾದ ಕೆಲಸ, ಆದರೆ ಹಣಕಟ್ಟುವ ಶಕ್ತಿ ಇದ್ದವರೂ ಸಾಲ ಮರುಪಾವತಿಸಲು ಮುಂದಾಗುತ್ತಿಲ್ಲ ಎಂದ ಅವರು ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಬ್ಯಾಂಕುಗಳು ಶಕ್ತಿಹೀನವಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಡುತ್ತದೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಆರ್ಥಿಕ ನಷ್ಟ ಅನುಭವಿಸಿದವರಿಗೆ ಸರ್ಕಾರಗಳು ಪರ್ಯಾಯವಾಗಿ ಹಣಕಾಸಿನ ವ್ಯವಸ್ಥೆ ಕಲ್ಪಿಸಬೇಕು, ಆದರೆ ಬ್ಯಾಂಕುಗಳಲ್ಲಿ ಮಾತ್ರ ಸಾಲ ಮರುಪಾವತಿ ಕಡ್ಡಾಯವಾಗುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ|| ಕೆ.ಪ್ರಸಾದ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿದೆ ಎಂದರು.
ವಿದ್ಯಾರ್ಥಿಗಳು ಈ ಹಿನ್ನೆಲೆಯಲ್ಲಿ ವಾಣಿಜ್ಯ ಶಾಸ್ತ್ರವನ್ನು ಅಭ್ಯಸಿಸಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ|| ಟಿ.ಸಿ.ಬಸವರಾಜ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ವಾಣಿಜ್ಯಶಾಸ್ತ್ರದ ಸಂಶೋಧನಾ ಲೇಖನಗಳನ್ನೊಳಗೊಂಡ ಗ್ರಂಥಗಳನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ|| ಎ.ಡಿ.ಜಾಧವ್ ಕ್ರೆಡಿಟ್ ಅಂಡ್ ಇನ್ವೆಸ್ಟ್‍ಮೆಂಟ್ ಮ್ಯಾನೇಜ್‍ಮೆಂಟ್ ವಿಷಯ ಕುರಿತು ಮತ್ತು ಆಚಾರ್ಯ ಬೆಂಗಳೂರು ಬಿ ಸ್ಕೂಲ್‍ನ ಪ್ರಾಧ್ಯಾಪಕ ಡಾ|| ಹೆಚ್.ಆರ್.ವೆಂಕಟೇಶ್ ಫೈನಾನ್ಸಿಯಲ್ ಇನ್‍ಕ್ಲೂಷನ್ ವಿಷಯ ಕುರಿತು ಮಾತನಾಡಿದರು.
ಬೆಳಗಿನಿಂದ ಸಂಜೆಯವರೆಗೆ ವಿವಿಧ ಗೋಷ್ಠಿಗಳು ನಡೆದವು, ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯಾಧಿಕಾರಿ ಡಾ|| ಕೆ.ವಿ.ಗಿರಿಧರ್, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|| ಹೆಚ್.ಎ.ಗಣಪತಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
ಉಪನ್ಯಾಸಕರಾದ ಸ್ವರೂಪ ಮತ್ತು ಶಾಂಭವಿ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ|| ಕೆ.ಎಂ.ಜಗದೀಶ್ ಸ್ವಾಗತಿಸಿದರು, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಕಲಾವತಿ ವಂದಿಸಿದರು.
Home ಸ್ಥಳಿಯ ಸುದ್ದಿ ಬ್ಯಾಂಕುಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಅವು ಸಧೃಡವಾಗಿದ್ದರೆ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರುತ್ತದೆ – ಡಾ||...