ಬಿಜೆಪಿಗೆ ಮತ್ತೊಂದು ಶಾಕ್ : ಕಮಲ ತೊರೆದು ಕೈ ಸೇರಲು ಮುಂದಾದ ಬಿಜೆಪಿ ಮಾಜಿ ಶಾಸಕ

1511

ಚಾಮರಾಜನಗರ : ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾಹಿತಿಯ ಬೆನ್ನಲ್ಲೇ ಗಡಿ ಚಾಮರಾಜನಗರ ಜಿಲ್ಲೆಯ ದಲಿತ ಸಮೂದಾಯದ ಸಜ್ಜನ ರಾಜಕಾರಣಿ ಎಂದು ಬಿಂಬಿತವಾಗಿದ್ದ ಮಾಜಿ ರಾಜ್ಯಪಾಲ ಬಿ.ರಾಚಯ್ಯರವರ ಸುಪುತ್ರ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಬಿಜೆಪಿ ತೊರೆಯಲು ಮುಂದಾಗಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮತ್ತೊಂದು ಪಕ್ಷದ ರಾಜಕಾರಣದ ಆಶ್ರಯ ಪಡೆಯಲು ಅಭಿಮಾನಿಗಳ ತಿರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ಸ್ಟಷ್ಟಪಡಿಸಿದರು.

ಚಾಮರಾಜನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಬಿಜೆಪಿಯಲ್ಲಿ ತಾನು ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದೆನು, ಆದರೆ ಕೊಳ್ಳೇಗಾಲದಲ್ಲಿ ಟಿಕೇಟ್ ಆಕಾಂಕ್ಷಿಗಳು ಅಧಿಕವಾಗಿದ್ದು, ಮತ್ತು ಪಕ್ಷದ ಮುಖಂಡರ ವರ್ತನೆಯಿಂದ ಬೇಸತ್ತು, ಬಿಜೆಪಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ತಾನು ಜನತಾ  ಪರಿವಾರದಿಂದ ರಾಜಕಾರಣ ಆರಂಭಿಸಿದ್ದು, ಎರಡು ಭಾರಿ ಶಾಸಕನಾಗಿದ್ದು, ತದ ನಂತರ ಬದಲಾದ ರಾಜಕಾರಣದಲ್ಲಿ ಜನತಾ ಪರಿವಾದ ಬಹುತೇಕ ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಆವೇಳೆ ತಾನು ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂಬ ಗೊಂದಲದಲ್ಲಿದ್ದಾಗ ಕಾರ್ಯಕರ್ತರು ಮತ್ತು ಅಭಿಮಾನಿಗಳ ನಿರ್ಧಾರದಂತೆ ಬಿಜೆಪಿ ಪಕ್ಷಕ್ಕೆ ಸೇರಿದೆ. ಆದರೆ ಅಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ದೇ ಮಾಡಲು ಅವಕಾಶ ಮಾಡಿಕೊಟ್ಟರು, ಆದರೆ ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದರಿಂದ ಸತತವಾಗಿ ಸೋಲನ್ನು ಕಾಣಬೇಕಾಯಿತು ಎಂದು ವಿವರಿಸಿದರು.

2004 ರಲ್ಲಿ ನಡೆದ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಮತಗಳಿಂದ ಪರಾಜಿತನಾಗಿದ್ದು, ಇಲ್ಲಿಯವರೆಗೆ ರಾಜಕಾರಣದಲ್ಲಿ ಯಶಸ್ಸು ಕಂಡಿಲ್ಲ. ಪ್ರಸ್ತುತ 2018 ರ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಬಯಸಿದ್ದಾಗ, ಬಿಜೆಪಿ ಪಕ್ಷದ ವರಿಷ್ಟರ ಅಸಹಕಾರ, ಮತ್ತು ತಮ್ಮನ್ನು ಮೂಲೆ ಗುಂಪು ಮಾಡಲು ಸಿದ್ದರಾಗಿರುವುದನ್ನು ಗಮನಿಸಿ ಕೊನೆಗೆ ಬಿಜೆಪಿ ಪಕ್ಷಕ್ಕೆ ತೊರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಯಾವುದೇ ಷರತ್ತು ಇಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್.ಸಿ.ಮಹದೇವಪ್ಪ ಮತ್ತಿತ್ತರ ಸಲಹೆ ಮತ್ತು ಮಾರ್ಗದರ್ಶದೊಂದಿಗೆ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ ಅದಕ್ಕೆ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೆಂಬಲಿಸಿದ್ದಾರೆ ಎಂದು ಹೇಳಿದರು.