ಮೂಡಿಗೆರೆ : ಎರಡು ಬಾರಿ ಜಿಲ್ಲಾ ಪಂಚಾಯಿತಿ ಸಭೆಗೆ ಗೈರಾಗುವ ಮೂಲಕ ಬಿಜೆಪಿ ಸದಸ್ಯರು ಜಿಲ್ಲೆಯ ಮತದಾರರಿಗೆ ಅಪಮಾನ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ಅನಂತ್ ಆರೋಪಿಸಿದ್ದಾರೆ.
ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಯು ಜಿಲ್ಲಾ ಪಂಚಾಯಿತಿಯನ್ನು ಅವಲಂಭಿಸಿರುತ್ತದೆ. ಕೋವಿಡ್ 19 ನಿಂದಾಗಿ, ಆಟೋ ಚಾಲಕರು, ದಿನಗೂಲಿ ನೌಕರರು, ಕಾರ್ಮಿಕರು ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಅಲ್ಲದೇ ಅತಿವೃಷ್ಟಿ, ಬೆಳೆಹಾನಿ, ಕಾಡುಪ್ರಾಣಿ ಹಾವಳಿಯಿಂದ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ, ಗ್ರಾಮೀಣ ರಸ್ತೆಗಳ ಸುಧಾರಣೆ, ವಸತಿ ಸಮಸ್ಯೆ, ನಿವೇಶನ ರಹಿತರ ಸಮಸ್ಯೆ ಸೇರಿದಂತೆ ಜಿಲ್ಲೆಯಲ್ಲಿ ಹತ್ತಾರು ಜ್ವಲಂತ ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳಿಗೂ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪರಿಹಾರವನ್ನು ರೂಪಿಸಬೇಕಾಗುತ್ತದೆ. ಆದರೆ ಅಧಿಕಾರವೇ ಮುಖ್ಯ ಎಂಬ ಧೋರಣೆಗೆ ಒಳಗಾಗಿರುವ ಬಿಜೆಪಿ ಹಾಗೂ ಅದೇ ಪಕ್ಷದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎರಡು ಬಾರಿ ಅವರದ್ದೇ ಪಕ್ಷದ ಸದಸ್ಯರ ಗೈರಿನಿಂದಾಗಿ ಸಭೆಯನ್ನು ಮುಂದೂಡುವ ಮೂಲಕ ಜಿಲ್ಲಾ ಪಂಚಾಯಿತಿಯ ಆಡಳಿತ ಯಂತ್ರವನ್ನೇ ದುರ್ಬಳಕೆ ಮಾಡಿಕೊಂಡಂತಾಗಿದ್ದು, ಮತದಾರರಿಗೆ ಅಪಮಾನ ಮಾಡಿದಂತಾಗಿದೆ. ಮತದಾನ ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಟ್ಟ ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದು, ಮತದಾರರಿಗೆ ಮಾಡಿದ ಅಪಮಾನಕ್ಕೆ ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕೂಡಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಬಿಜೆಪಿ ಸದಸ್ಯರು ಮತದಾರರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.










