ಚಿಕ್ಕಮಗಳೂರು : ದತ್ತಪೀಠ ಹಾಗೂ ಹಿಂದುತ್ವದ ಹೆಸರಿನಲ್ಲಿ ತನ್ನ ರಾಜಕೀಯ ನೆಲೆಯನ್ನ ಗಟ್ಟಿಯಾಗಿಸಿಕೊಂಡು ಮೂರು ಬಾರಿ ಶಾಸಕರಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಗಳಿಸಿರೋ ಸಿ.ಟಿ.ರವಿ ಚುನಾವಣೆ ಹತ್ತಿರವಾಗ್ತಿದ್ದಂತೆ ಮತ್ತೆ ಹಿಂದುತ್ವದ ಮೊರೆ ಹೋಗಿದ್ದಾರೆ. ಇಷ್ಟು ದಿನ ಕ್ಷೇತ್ರದ ಗ್ರಾಮ ಪಂಚಾಯತ್‍ಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಆಟವಾಡಿ, ಕುಣಿದು ಕುಪ್ಪಳಿಸಿ ಗ್ರಾಮೀಣ ಪ್ರದೇಶದ ಜನರ ಹಾಗೂ ಯುವಕರ ವೋಟ್ ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿದ್ರು. ಇದೀಗ ಮತ್ತೆ, ಹಿಂದುತ್ವದ ಮೊರೆ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ನಾಗಸಾಧುಗಳನ್ನ ಮನೆಗೆ ಕರೆಸಿಕೊಂಡು ಪಾದ ಪೂಜೆ ಮಾಡಿದ್ದ ರವಿ, ಈಗ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಪಾದಪೂಜೆಗೆ ಮೊರೆ ಹೋಗಿದ್ದಾರೆ. ಇಂದು ಹಲವು ಸಮುದಾಯದ ಸ್ವಾಮಿಜಿಗಳನ್ನ ಮನೆಗೆ ಕರೆಸಿ ಪತ್ನಿ ಪಲ್ಲವಿ ಜೊತೆ, ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಸೇವಾಲಾಲ್ ಮಠದ ಬಸವ ಸರ್ದಾರ್ ಸ್ವಾಮೀಜಿ, ಯಾದವ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನ ಸ್ವಾಮೀಜಿ, ಉಪ್ಪಾರ ಮಠದ ಭಗೀರಥ ನಿರಂಜನಾ ಸ್ವಾಮೀಜಿ ಹಾಗೂ ಮಾದಾರ ಚೆನ್ನಯ್ಯ ಸ್ವಾಮೀಜಿಗಳ ಪಾದ ಪೂಜೆ ಮಾಡಿದ್ದಾರೆ.