ಮೂಡಿಗೆರೆ : ಚುನಾವಣೆ ಸಮೀಪಿಸುತ್ತಿದ್ದಂತೆ ಮೂಡಿಗೆರೆ ಬಿಜೆಪಿ ವಲಯದಲ್ಲಿ ಭಾರೀ ಬದಲಾವಣೆ ಗಾಳಿ ಬೀಸುತ್ತಿದೆ. ಇಷ್ಟು ದಿನ ಕುಮಾರಸ್ವಾಮಿಯೇ ನಮ್ಮ ನಾಯಕ, ಅವರೇ ಮುಂದಿನ ಶಾಸಕ ಎಂದು ಹೇಳುತ್ತಿದ್ದ ತಾಲೂಕಿನ ಕಾರ್ಯಕರ್ತರು ಈಗ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶಾಸಕ ಕುಮಾರಸ್ವಾಮಿ ಮೇಲೆ ಅನ್ಯ ಮಹಿಳೆಯ ಜೊತೆ ಮಾತನಾಡಿರೋ ಫೋನ್ ಸಂಭಾಷಣೆ, ವಿಧಾನಸೌಧದ ಬಳಿ ತನ್ನ ಹೆಂಡತಿ ಮೇಲೆ ಹಲ್ಲೆ ಮಾಡಿದ ಪ್ರಕರಣ ಸೇರಿದಂತೆ ಸಾಕಷ್ಟು ಆರೋಪಗಳಿವೆ. ಇದರಿಂದ ಪಕ್ಷದ ಅಭಿವೃದ್ಧಿ ಹಾಗೂ ಗೆಲುವಿನ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮಲೆನಾಡಿಗರು ಅತೀ ಸೂಕ್ಷ್ಮವಾದ ಜನ. ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಮತ್ತೆ ಅವರಿಗೆ ಟಿಕೆಟ್ ನೀಡಿದ್ರೆ ಫಲಿತಾಂಶದಲ್ಲಿ ಏರುಪೇರಾಗಬಹುದು ಎಂದು ಹೊಸ ಮುಖದತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಮೂಡಿಗೆರೆಯ ಖಾಸಗಿ ಸಭಾಂಗಣದಲ್ಲಿ ಸಭೆ ಸೇರಿದ್ದ 500ಕ್ಕೂ ಅಧಿಕ ಕಾರ್ಯಕರ್ತರು ಪಕ್ಷದ ಅಭಿವೃದ್ಧಿ ಹಾಗೂ ಗೆಲುವೆ ನಮ್ಮ ಧ್ಯೇಯ. ಮತ್ತೆ ಕುಮಾರಸ್ವಾಮಿಗೆ ಟಿಕೆಟ್ ನೀಡಿದ್ರೆ ಪಕ್ಷ ಮುಜುಗರಕ್ಕೀಡಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಬಾರಿ ಹೊಸ ಮುಖಕ್ಕೆ ನಮ್ಮ ಬೆಂಬಲ ಎಂದು ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಇದು ತಾಲೂಕಿನ ಎಲ್ಲಾ ಹೋಬಳಿಗಳ ಮುಖಂಡರು ಹಾಗೂ ತಾಲೂಕು ಮಟ್ಟದ ಪಕ್ಷದ ಮುಖಂಡರು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷ ಸುಂದ್ರೇಶ್‍ರನ್ನ ಅಮಾನತು ಮಾಡಿದ್ದು ಕುಮಾರಸ್ವಾಮಿಗೆ ಮಗ್ಗಲ ಮುಳ್ಳಾದಂತೆ ಕಾಣ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಒಂದು ಒಂದು ಹೇಳಿಕೆಗೆ ಪಕ್ಷ ಅವನನ್ನ ಎಂಟೇ ದಿನಕ್ಕೆ ಅಮಾನತು ಮಾಡಿದೆ ಎಂದು ಸರಿ-ತಪ್ಪು ವಿಚಾರಿಸಲಿಲ್ಲ. ತನಿಖೆ ನಡೆಸಲಿಲ್ಲ ಎಂದು ಪಕ್ಷದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಯಾದಾಗಿ ಕುಮಾರಸ್ವಾಮಿಯ ಮೇಲೂ ಸಾಕಷ್ಟು ಆರೋಪಗಳಿವೆ, ಮತದಾರರ ಎದುರು ಪಕ್ಷ ಮುಜುಗರಕ್ಕೀಡಾಗಬಾರದು, ಮತ ಕೇಳಲು ಹೋದಾಗ ಮತದಾರರು ನೇರಾನೇರ ಮಾತನಾಡ್ತಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ಹೊಸ ಮುಖದತ್ತ ತಾಲೂಕಿನ ಕಾರ್ಯಕರ್ತರು ಚಿಂತಿಸಿದ್ದಾರೆ.
ಕಳೆದ ಫೆಬ್ರವರಿ 6 ರಂದು ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳು ಮೂಡಿಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಮಾಜಿ ಶಾಸಕ ಕುಮಾರಸ್ವಾಮಿ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದ್ರು. ಬಳಿಕ ಸುಂದ್ರೇಶ್ ಅಯೋಗ್ಯರ ಸ್ಪರ್ಶದಿಂದ ಶ್ರೀಗಳು ಅಪವಿತ್ರವಾಗಿದ್ದಾರೆಂದು ವಾಟ್ಸಾಪ್‍ನಲ್ಲಿ ಚರ್ಚಿಸಿದ್ರು. ಇದಾದ ಎಂಟೇ ದಿನಕ್ಕೆ ಸುಂದ್ರೇಶ್‍ರನ್ನ ಪಕ್ಷ ಅಮಾನತು ಮಾಡಿತ್ತು. ಆದ್ರೆ, ಈ ಬಗ್ಗೆ ಫಸ್ಟ್ ಸುದ್ದಿಗೆ ಪ್ರತಿಕ್ರಿಯೆ ನೀಡಿರೋ ಸುಂದ್ರೇಶ್, ನಾನು ಒಕ್ಕಲಿಗರ ಪರವೂ ಅಲ್ಲ, ದಲಿತ ವಿರೋಧಿಯೂ ಅಲ್ಲ. ಅಂದು ಮೋಟಮ್ಮ, ಬಣಕಲ್ ಶಾಮಣ್ಣ, ದೀಪಕ್ ದೊಡ್ಡಯ್ಯ ಸೇರಿದಂತೆ ಹತ್ತಾರು ಜನ ಶ್ರೀಗಳ ಪಾದಮುಟ್ಟಿ ಆಶೀರ್ವಾದ ಪಡೆದಿದ್ರು. ಇವರ ಬಗ್ಗೆಯೆ ಏಕೆ ಹೇಳಿದೆ ಅಂದರೆ ಅದಕ್ಕೆ ಕಾರಣ ಇಡೀ ರಾಜ್ಯಕ್ಕೆ ಗೊತ್ತಿದೆ, ಅಂತಹಾ ವ್ಯಕ್ತಿ ಮತ್ತೊಮ್ಮೆ ಶಾಸಕನಾಗೋದ್ರಿಂದ ಪಕ್ಷ ಮುಜುಗರಕ್ಕೀಡಾಗಲಿದೆ ಎಂದು ಆ ಪದ ಬಳಸಿದ್ದೆ ಅಷ್ಟೆ ಎಂದು ಸ್ಟಷ್ಟನೆ ನೀಡಿದ್ರು. ಸುಂದ್ರೇಶ್ ಹೇಳಿಕೆ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ಪಕ್ಷ ನಡೆದುಕೊಂಡ ರೀತಿ ಕೂಡ ಕ್ಷೇತ್ರದಲ್ಲಾದ ಬದಲಾವಣೆ ಎಳ್ಳಷ್ಟು ಕಾರಣವಾಗಿರೋದ್ರಲ್ಲಿ ಅನುಮಾನವಿಲ್ಲ.
ಆದ್ರೀಗ, ಶಿಸ್ತಿನ ಪಕ್ಷ ಬಿಜೆಪಿ ಮನೆಯ ಪರಿಸ್ಥಿತಿ ಕಂಡ ಜೆಡಿಎಸ್ ಹಾಗೂ ಕಾಂಗ್ರೆಸ್ ಮನಸಲ್ಲೇ ಮೊಸರನ್ನ ತಿನ್ನುತ್ತಿದ್ದಾರೆ. ಬಿಜೆಪಿಯಲ್ಲಿನ ಸ್ಥಿತಿ ಕಂಡು ಪ್ರಚಾರವನ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ನನ್ನದೆ ಎಂದು ಸಂತಸದಲ್ಲಿದ್ದಾರೆ. ಅದು ಸಾಮಾನ್ಯ ಕೂಡ. ಕೂಡಲೇ ಬಿಜೆಪಿಯ ಹಿರಿಯ ನಾಯಕರು ಇಲ್ಲಿನ ಸಮಸ್ಯೆಗೊಂದು ಪರಿಹಾರ ಹುಡುಕದಿದ್ದರೆ ಫಲಿತಾಂಶದಲ್ಲಿ ಭಾರೀ ಬದಲಾವಣೆ ಆಗೋದ್ರಲ್ಲಿ ಅನುಮಾನವಿಲ್ಲ. ಕುಮಾರಸ್ವಾಮಿ ಬದಲು ಹೊಸ ಮುಖ ತರುತ್ತಾರೋ ಅಥವ ಪಕ್ಷದ ಕಾರ್ಯಕರ್ತರನ್ನ ಒಗ್ಗೂಡಿಕೊಂಡು ಹೋಗಿ ಎಂದು ಹೇಳ್ತಾರೋ ಗೊತ್ತಿಲ್ಲ. ಆದ್ರೆ, ಬಿಜೆಪಿಯ ಸದ್ಯದ ಸ್ಥಿತಿ ಕಂಡು ಮೋಟಮ್ಮ-ನಿಂಗಯ್ಯ ದಿನ ರಾತ್ರಿ ಹಾಲು ಅನ್ನ ಊಟ ಮಾಡ್ತಿರೋದಂತು ಸತ್ಯ.