ಚಿಕ್ಕಮಗಳೂರು : ಲಾಕ್‍ಡೌನ್ ನಿರ್ಬಂಧದ ನೇರ ಪರಿಣಾಮ ದೇಶದ ಕಾರ್ಮಿಕ ವರ್ಗದ ಮೇಲಾಗಿದೆ : ಗುಣಶೇಖರ್.

242
firstsuddi

ಚಿಕ್ಕಮಗಳೂರು : ಲಾಕ್‍ಡೌನ್ ನಿರ್ಬಂಧದ ನೇರ ಪರಿಣಾಮ ದೇಶದ ಕಾರ್ಮಿಕ ವರ್ಗದ ಮೇಲಾಗಿದೆ, ಉಳಿದ ಎಲ್ಲಾ ವರ್ಗಗಳಿಗಿಂತ ಹೆಚ್ಚು ಸಂಕಷ್ಟವನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಗುಣಶೇಖರ್ ಹೇಳಿದರು.
ಮೇ ದಿನದ ಅಂಗವಾಗಿ ನಗರದ ಸಿಪಿಐ ಕಛೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ನಿಲುವುಗಳಿಂದಾಗಿ ಕಾರ್ಮಿಕರು, ಬಡವರು ನರಳುವಂತಾಗಿದ್ದು, ಅದರ ವಿರುದ್ದ ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರೇಣುಕಾರಾಧ್ಯ ಮಾತನಾಡಿ ಮೇ ದಿನ ಆರಂಭಗೊಂಡು 134 ವರ್ಷಗಳು ಕಳೆದರೂ ಇನ್ನೂ ದೇಶದಲ್ಲಿ ದುಡಿಯುವ ವರ್ಗ ಬೇಡುವ ಸ್ಥಿತಿಯಲ್ಲಿದೆ, ಆಳುವ ವರ್ಗ ಐಶಾರಾಮಿಯಾಗಿ ಬದುಕುತ್ತಿದೆ ಎಂದು ವಿಷಾದಿಸಿದರು.
ಸಿಪಿಐ ರಾಜ್ಯ ಸಮಿತಿ ಸದಸ್ಯ ಬಿ.ಅಮ್ಜದ್ ಮಾತನಾಡಿ ದೇಶದಲ್ಲಿ ಇನ್ನೂ ಬಂಡವಾಳ ಶಾಹಿ ವ್ಯವಸ್ಥೆ ಮುಂದುವರೆಯುತ್ತಿರುವುದು ಕಾರ್ಮಿಕರ ಸ್ಥಿತಿ ಶೋಚನೀಯವಾಗಿರುವುದು ದುರಂತ ಎಂದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಎಐಟಿಯುಸಿ ಜಿಲ್ಲಾಧ್ಯಕ್ಷ ಗುಣಶೇಖರ್ ಧ್ವಜಾರೋಹಣ ನೆರವೇರಿಸಿದರು, ಕಾರ್ಮಿಕರಿಗೆ ಸಿಹಿ ವಿತರಿಸಲಾಯಿತು.
ಸಿಪಿಐ ಜಿಲ್ಲಾ ಖಜಾಂಚಿ ವಿಜಯಕುಮಾರ್, ಸಹಕಾರ್ಯದರ್ಶಿ ರಘು, ಜಯಕುಮಾರ್, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ವಸಂತಕುಮಾರ್ ಉಪಸ್ಥಿತರಿದ್ದರು.