ಚಿಕ್ಕಮಗಳೂರು : ಒಂದು ವಾರದ ಒಳಗಾಗಿ ಸಾಲ ಮರುಪಾವತಿಸದಿದ್ದಲ್ಲಿ ರೈತರ ಮೇಲೆ ದಾವ ಹೂಡುವ ಎಚ್ಚರಿಕೆ ನೀಡಿದ ಬ್ಯಾಂಕ್…!

415
firstsuddi

ಚಿಕ್ಕಮಗಳೂರು : ಕಳೆದ 38 ದಿನಗಳಿಂದ ಕೊರೊನಾ ಆತಂಕದಲ್ಲಿ ದೇಶವೇ ಲಾಕ್‍ಡೌನ್ ಆಗಿ ಇಡೀ ದೇಶವೇ ಸ್ಥಬ್ಧವಾಗಿದ್ದು, ಆರ್ಥಿಕ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜನ ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಏಳು ದಿನಗಳ ಒಳಗಾಗಿ ಸಾಲ ಮರುಪಾವತಿಸದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಜಿಲ್ಲೆಯ ಕಡೂರು ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೋಟೀಸ್ ನೀಡಿದ್ದು, ರೈತರು ಕಂಗಾಲಾಗಿದ್ದಾರೆ. ಕಡೂರಿನ ಟಿ.ಬಿ.ರಸ್ತೆ ನಿವಾಸಿ ಶಂಕರ್ ಎಂಬುವರು 2016ರಲ್ಲಿ ಭೂ ಅಭಿವೃದ್ಧಿ ಉದ್ದೇಶದಿಂದ ಎರಡು ಲಕ್ಷ ಹಣ ಸಾಲವಾಗಿ ಪಡೆದಿದ್ದರು. ಆದರೆ, ಶಂಕರ್ ಅವರು ಕಾರಣಾಂತರಗಳಿಂದ ಸಾಲ ಮರುಪಾವತಿಸಿಲ್ಲ. ಈ ಬಗ್ಗೆ ಶಂಕರ್ ಅವರಿಗೆ ಬ್ಯಾಂಕ್ ನಿಂದ ಆಗಾಗ್ಗೆ ಸಾಲ ಮರುಪಾವತಿಸುವಂತೆ ನೋಟೀಸ್ ಕೂಡ ನೀಡಿದ್ದು, ಶಂಕರ್ ಅವರು ಸಾಲ ಕಟ್ಟಿರಲಿಲ್ಲ. ಆದರೆ, ಈಗ ಬ್ಯಾಂಕ್ ನಿಂದ ನೋಟೀಸ್ ಕಳುಹಿಸಿದ್ದು, ಇನ್ನು ಏಳು ದಿನಗಳ ಒಳಗಾಗಿ ಅಸಲು ಹಾಗೂ ಬಡ್ಡಿ ಎರಡು ಸೇರಿ 3 ಲಕ್ಷದ 9 ಸಾವಿರ ಹಣ ಕಟ್ಟುವಂತೆ ನೋಟೀಸ್ ನೀಡಿದ್ದು, ಕಟ್ಟದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಕಳೆದ 1 ತಿಂಗಳಿನಿಂದ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಇಂತಹಾ ಸಂದರ್ಭದಲ್ಲಿ ಬ್ಯಾಂಕ್ ವಕೀಲರು ನೋಟೀಸ್ ನೀಡಿ 7 ದಿನಗಳ ಒಳಗಾಗಿ ಸಾಲ ಮರುಪಾವತಿಸದಿದ್ದಲ್ಲಿ ದಾವ ಹೂಡುವ ಎಚ್ಚರಿಕೆ ನೀಡಿರುವುದು ರೈತರಿಗೆ ಮತ್ತಷ್ಟು ತಲೆ ನೋವಾಗಿದೆ.