ಚಿಕ್ಕಮಗಳೂರು : ಪೊಲೀಸರೆಲ್ಲಾ ಕೆಟ್ಟವರಲ್ಲ, ಅವರ ಹೃದಯದಲ್ಲೂ ಓರ್ವ ಮನುಷ್ಯನಿರುತ್ತಾನೆ…

1987
firstsuddi

ಚಿಕ್ಕಮಗಳೂರು : ಭಾರತ ಲಾಕ್ ಡೌನ್ ಆದ ಮೇಲೆ ಜನಸಾಮಾನ್ಯರಂತು ಪೊಲೀಸರ ಮೇಲೆ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಜನರಿಗೆ ಹೊಡೆದದ್ದು ಇದೆ, ಜನ ಪೊಲೀಸರಿಗೆ ಹೊಡೆದದ್ದೂ ಇದೆ. ಆದರೆ ಪೊಲೀಸರ ಈ ಆಕ್ರೋಶ ಹಿಂದಿನ ಕಾಳಜಿ ಯಾರಿಗೂ ಕಾಣಲೇ ಇಲ್ಲ. ಪೊಲೀಸರು ಅಂದರೆ ಧಿಮಾಕು, ಅಹಂಕಾರ, ದೌಲತ್ತು ಅನ್ನುವವರೆ ಹೆಚ್ಚು. ಅವರು ನಮ್ಮಂತೆ ಮನುಷ್ಯರು ಹೆಂಡತಿ, ಮಕ್ಕಳನ್ನು ಬಿಟ್ಟು ನಮ್ಮನ್ನು ಕಾಯುತ್ತಿದ್ದಾರೆಂದು ಯಾರೂ ಭಾವಿಸುವುದಿಲ್ಲ. ಆ ಕಲ್ಪನೆಯೂ ಬರುವುದಿಲ್ಲ ಬಿಡಿ. ಆದರೆ ಅಂತಹಾ ಪೊಲೀಸರಲ್ಲೂ ಓರ್ವ ಮನುಷ್ಯನಿರುತ್ತಾರೆ ಅನ್ನುವುದು ಮಾತ್ರ ಸತ್ಯ.

ಯಾಕೆಂದರೆ, ಕೊರೋನ ಭದ್ರತೆಯಂತಹಾ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಅವರ ಸೇವೆ, ಅವರು ಮಾಡುತ್ತಿರುವ ಕೆಲಸ ಮನುಷ್ಯತ್ವ, ಮಾನವೀಯತೆಗೆ ಮೀರುವಂತದ್ದು. ಯಾಕೆಂದರೆ ಮೂಡಿಗೆರೆಯಲ್ಲಿ ಜನಸ್ನೇಹಿಯಾಗಿ, ಸಾಕಷ್ಟು ಹೆಸರು ಮಾಡಿದ್ದ ಸಬ್ ಇನ್ಸ್ಪೆಕ್ಟರ್ ರಫೀಕ್ ಅವರು ಈಗ ತರೀಕೆರೆ ತಾಲೂಕಿನ ಲಿಂಗದಹಲ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಿಂಗದಹಳ್ಳಿಯ ಜನಕ್ಕೆ ಇವರು ಸಬ್ಇನ್ಸ್ ಪೆಕ್ಟರೋ ಅಥವ ಸಮಾಜ ಸೇವಕರೋ ಎಂಬಂತಹಾ ಗೊಂದಲ ನಿರ್ಮಾಣವಾಗಿದೆ. ಯಾಕೆಂದರೆ ಅವರು ಲಿಂಗದಹಳ್ಳಿಯಲ್ಲಿ ಮಾಡುತ್ತಿರುವಂತಹಾ ಕೆಲಸ ಅಂತಹದ್ದು. ಕೊರೋನ ಭದ್ರತೆಯಲ್ಲಿ ಎಂತಹಾ ಬ್ಯುಸಿ ಶೆಡ್ಯೂಲ್ ಇದೆ ಅಂತ ಪೊಲೀಸರಿಗಷ್ಟೆ ಗೊತ್ತು. ದೂರದಲ್ಲಿ ನಿಂತು ಪೊಲೀಸರ ವರ್ತನೆ ಕಂಡು ಬಯ್ಯೋ ಜನರಿಗಂತು ಎಳ್ಳಷ್ಟು ಗೊತ್ತಿಲ್ಲ. ಆದರೆ ರಫೀಕ್ ಅವರು ಭದ್ರತೆಯನ್ನೂ ಕೊಟ್ಟುಕೊಂಡು, ಸಿಬ್ಬಂದಿಗಳನ್ನೂ ಸಂತೈಸಿಕೊಂಡು, ತನ್ನ ಆರೋಗ್ಯದ ಜೊತೆ ಸಿಬ್ಬಂದಿಗಳ ಆರೋಗ್ಯವನ್ನೂ ನೋಡಿಕೊಂಡೂ ಮೇಲಾಧಿಕಾರಿಗಳ ಪ್ರಶ್ನೆಗೆ ಉತ್ತರವನ್ನೂ ಕೊಟ್ಟುಕೊಂಡು ಮಾಡುತ್ತಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು.

ಕೊರೋನ ವೈರಸ್ ನ ಭಯದಿಂದ ಇಡೀ ದೇಶವೇ ಲಾಕ್ ಡೌನ್ ಆದ ಮೇಲೆ, ಕೂಲಿ ಕಾರ್ಮಿಕರು, ನಿರಾಶ್ರಿತರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಅಂದೇ ದುಡಿದು ಅಂದೇ ತಿನ್ನುವ ಜನರಂತು ಕೆಲಸವಿಲ್ಲ, ದುಡ್ಡಿಲ್ಲ ಊಟ-ತಿಂಡಿ ಇಲ್ಲದೆ ಉಪವಾಸವಿದ್ದರು. ಆಗ ಮನಕರಗಿದ್ದು ನಾವು-ನೀವೆಲ್ಲಾ ಬಯ್ಯೋ ಪೊಲೀಸರ ಮನವೇ. ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ, ಕಲ್ಲತ್ತಿಪುರ, ಕೃಷ್ಣಾಪುರ, ತಣಿಗೆಬೈಲು, ಕೆಮ್ಮಣ್ಣುಗುಂಡಿ ಗ್ರಾಮಗಳ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರು ಅಸಹಾಯಕರಾಗಿದ್ದರು. ಅಂತಹಾ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಸೂರು ನಿರ್ಮಿಸಿಕೊಟ್ಟು ಮೂರು ಹೊತ್ತು ಇರುವ ಜಾಗಕ್ಕೆ ಊಟ ತಲುಪಿಸಿದ್ದು ಇದೇ ಪೊಲೀಸರು. ಕಾರ್ಮಿಕರ ನೋವನ್ನು ಅರಿತ ಪಿಎಸ್ಐ ರಫೀಕ್ ಅವರು ಠಾಣೆಯ ಎಲ್ಲಾ ಸಿಬ್ಬಂದಿಗಳು ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಹಾಕಿ ಎಲ್ಲರಿಗೂ ಕಳೆದ ಒಂದು ವಾರದಿಂದ ಆಹಾರವನ್ನು ತಾವೇ ತಯಾರಿಸಿ ಕಾರ್ಮಿಕರಿರುವ ಜಾಗಕ್ಕೆ ಹೋಗಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡುತ್ತಿದ್ದಾರೆ. ಪೊಲೀಸರ ಈ ಕೆಲಸವನ್ನು ನೋಡಿದ ಸ್ಥಳಿಯರು ಕೂಡ ಇದೀಗ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.

ಇನ್ನು ಇವರ ಜೊತೆ, ಚಿಕ್ಕಮಗಳೂರು ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ತೇಜಸ್ವಿ, ಹಾಗೂ ಇನ್ಸ್ಪೆಕ್ಟರ್ ಸಲೀಂ ಅವರು ಕೂಡ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಮಾಡುತ್ತಿರುವ ಕೆಲಸ ಜನಮೆಚ್ಚುವಂತದ್ದು. ಸಿಬ್ಬಂದಿಗಳೊಂದಿಗೆ ದಾನಿಗಳು ನೀಡಿದ ಆಹಾರ ಸಾಮಾಗ್ರಿಗಳನ್ನು ಮನೆ-ಮನೆ ತಲುಪಿಸುವ ಪುಣ್ಯದ ಕೆಲಸವನ್ನು ಈ ಪೊಲೀಸರು ಮಾಡುತ್ತಿದ್ದಾರೆ. ಹಣವಂತರು ಕೊಟ್ಟು ಸುಮ್ಮನಾಗುತ್ತಾರೆ. ಆದರೆ ಅದನ್ನು ನಿಜವಾದ ಸಂತ್ರಸ್ತರಿಗೆ ತಲುಪಿಸುವುದು ಅದಕ್ಕಿಂತ ಪುಣ್ಯ ಅಂತಾರೆ ದೊಡ್ಡವರು. ಪೊಲೀಸರ ಎಷ್ಟೆ ಆರೋಪ-ಪ್ರತ್ಯಾರೋಪಗಳಿರಬಹುದು. ಆದರೆ ಕೊರೋನ ಭಯ ಆರಂಭವಾದಾಗಿನಿಂದ ಪೊಲೀಸರು, ವೈದ್ಯರು, ನರ್ಸ್‍ಗಳ ಕೆಲಸ ಪ್ರತಿಯೊಬ್ಬನು ತಮ್ಮ ಜೀವಿತಾವಧಿಯಲ್ಲಿ ಮರೆಯಲಾಗದು.