ಚಿಕ್ಕಮಗಳೂರು : ಡಿಕೆಶಿ ನಿವಾಸದ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ…

207
firstsuddi

ಚಿಕ್ಕಮಗಳೂರು : ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೇಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಆಜಾದ್ ಪಾರ್ಕ್ ವೃತ್ತದ ಬಳಿ ಜಮಾಯಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಕಳ್ಳರು ದೇಶವನ್ನು ರಾವಣ ರಾಜ್ಯ ಮಾಡಿದ್ದಾರೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ವಿರೋಧಿಗಳು ಮತ್ತು ತಮಗಾಗದವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಬಲವಾಗಿ ಬೆಳೆಯುತ್ತಿರುವುದರಿಂದ ಹತಾಶವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಮೇಲೆ ಐ.ಟಿ ದಾಳಿ, ಇ.ಡಿ ದಾಳಿ ಇದೀಗ ಸಿಬಿಐ ದಾಳಿ ನಡೆಸುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿವೆ ಎಂದು ದೂರಿದರು.
ಭ್ರಷ್ಟರ ವಿರುದ್ದ ಸಿಬಿಐ ದಾಳಿ ನಡೆಸುವುದಾದರೆ ಬಿಜೆಪಿ ನಾಯಕರು ಮತ್ತು ಅವರ ಹಿಂಬಾಲಕರ ಮನೆಗಳ ಮೇಲೆ ಮೊದಲು ದಾಳಿ ನಡೆಸಲಿ ಎಂದು ಸವಾಲು ಹಾಕಿದ ಮೂರ್ತಿ ಕಾಂಗ್ರೇಸ್ ಕಾರ್ಯಕರ್ತರು ಮತ್ತು ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶರಾಗಿರುವ ಬಿಜೆಪಿಯವರು ಸಿಬಿಐ ದಾಳಿಯಂತಹ ಕುತಂತ್ರ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರಿದ್ದು, ಅವರನ್ನು ಏನೂ ಮಾಡಲಾಗದು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಡಾ|| ಅಂಶುಮತ್ ಮಾತನಾಡಿ ದೇಶದಲ್ಲಿ ಕಾಂಗ್ರೇಸ್ ಬಗ್ಗೆ ಒಲವು ಹೆಚ್ಚುತ್ತಿರುವುದನ್ನು ಮನಗಂಡಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೇಸ್ ನಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಇದರ ವಿರುದ್ದ ಕಾಂಗ್ರೇಸ್ ಕಾರ್ಯಕರ್ತರು ದನಿಯೆತ್ತಬೇಕು ಎಂದು ಕರೆ ನೀಡಿದರು.
ಪಕ್ಷದ ಜಿಲ್ಲಾ ವಕ್ತಾರ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಂಗ್ರೇಸ್ ನಾಯಕರಿಗೆ ಕಿರುಕುಳ ನೀಡುವ ಮೂಲಕ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ತರೀಕೆರೆ ಮಾಜಿ ಶಾಸಕ ಶ್ರೀನಿವಾಸ್, ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮಹಮ್ಮದ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಪಕ್ಷದ ಮುಖಂಡರಾದ ಡಿ.ಎಂ.ವಿಜಯ್, ರಾಹಿಲ್ ಷರೀಫ್, ಕೆ.ವಿ.ಶಿವಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ, ಹೆ.ಪಿ.ಮಂಜೇಗೌಡ, ಸಿಲ್ವಸ್ಟರ್, ರಸೂಲ್ ಖಾನ್, ಮಹಡಿಮನೆ ಸತೀಶ್, ಕೆ.ಎಸ್.ಆನಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.