ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ…

147
firstsuddi

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳನ್ನು ಖಂಡಿಸಿ ಅಂಚೆ ಇಲಾಖೆ ನೌಕರರ ವಿವಿಧ ಸಂಘಟನೆಗಳು, ನೌಕರರು, ಸಿಬ್ಬಂಧಿಗಳು, ನಗರದ ಪ್ರಧಾನ ಅಂಚೆ ಕಛೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಕಚೇರಿ ಆರಂಭವಾಗುತ್ತಿದ್ದಂತೆ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ನೌಕರರು ಮತ್ತು ಸಿಬ್ಬಂಧಿಗಳು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪದ್ದತಿಯನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ವಾರದಲ್ಲಿ ಐದು ದಿನಗಳ ಉದ್ಯೋಗ ಜಾರಿಗೊಳಿಸಬೇಕು, ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು, ಏಳನೇ ವೇತನ ಆಯೋಗವನ್ನು ಪರಿಷ್ಕರಿಸಬೇಕು, ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಅಂಚೆ ನೌಕರರ ಗುಂಪು ವಿಮಾ ಮೊತ್ತವನ್ನು ಐದು ಲಕ್ಷ ರೂಗೆ ಹೆಚ್ಚಿಸಬೇಕು, ವೈದ್ಯಕೀಯ ಸೌಲಭ್ಯ ನೀಡಬೇಕು, ವರ್ಗಾವಣೆ ನೀತಿ ಸಡಿಲಗೊಳಿಸಬೇಕು, ಗ್ರಾಮೀಣ ಅಂಚೆ ನೌಕರರು ನಿವೃತ್ತರಾದ ದಿನವೇ ಇನ್ನಿತರ ನೌಕರರಿಗೆ ನೀಡುವಂತೆ ಎಲ್ಲಾ ಸೌಲಭ್ಯಗಳನ್ನೂ ನೀಡಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವರಾಜೇಗೌಡ, ಕಾರ್ಯದರ್ಶಿ ಎಂ.ಡಿ.ಲೋಹಿತ್ ಕುಮಾರ್, ಖಜಾಂಚಿ ಅಸ್ಲಾಂ ಅಹಮದ್, ಮಿಥುನ್ ಕುಮಾರ್ ಹಾಗೂ ಇಲಾಖೆ ನೌಕರರ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.