ಚಿಕ್ಕಮಗಳೂರು : ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಫಿ ಉದ್ಯಮಕ್ಕೆ ನೀಡಿರುವ ಕೊಡುಗೆ ಶೂನ್ಯ ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಹೇಳಿದ್ದಾರೆ.
2004-06 ಮತ್ತು 2010 ರಲ್ಲಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾಗ ಅಂದಿನ ಕೇಂದ್ರದ ಯುಪಿಎ ಸರ್ಕಾರ 2 ಸಾವಿರ ಕೋಟಿ ಪ್ಯಾಕೇಜ್ ನೀಡಿತ್ತು, ಕಾಫಿ ಮಂಡಳಿ ಮುಖಾಂತರ 900 ಕೋಟಿ ರೂ ಸಬ್ಸಿಡಿಯನ್ನು ಬೆಳೆಗಾರರಿಗೆ ನೀಡುವ ಮೂಲಕ ಅವರ ನೆರವಿಗೆ ಧಾವಿಸಿತ್ತು ಇದರಿಂದಾಗಿ ಅಂದು ಕಾಫಿ ಉದ್ಯಮ ಚೇತರಿಸಿಕೊಂಡಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾರ್ಷಿಕ 6 ಸಾವಿರ ಕೋಟಿ ವಿದೇಶಿ ವಿನಿಮಯ ಗಳಿಸಿಕೊಡುವ ಕಾಫಿ ಉದ್ಯಮ ಕಳೆದ ಐದು ವರ್ಷಗಳಿಂದ ತತ್ತರಿಸುತ್ತಿದ್ದರೂ ನಯಾಪೈಸೆಯಷ್ಟೂ ನೆರವು ನೀಡಿಲ್ಲ, ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ಕುಂಠಿತ, ಗಿಡಗಳಿಗೆ ರೋಗ ಭಾದೆ, ಕಾರ್ಮಿಕರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಬಳಲುತ್ತಿದ್ದರೂ ಅವರತ್ತ ತಿರುಗಿ ನೋಡಿಲ್ಲ ಎಂದು ಆರೋಪಿಸಿದ್ದಾರೆ.
ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ದೊರೆಯುತ್ತಿದ್ದ ಎಲ್ಲಾ ಸವಲತ್ತುಗಳನ್ನೂ ನಿಲ್ಲಿಸಿದ್ದಾರೆ, ಹಂತ ಹಂತವಾಗಿ ಕಾಫಿ ಮಂಡಳಿಯನ್ನು ಮುಚ್ಚುತ್ತಿದ್ದಾರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆಗಾರರು ಸಾಲ ದೊರೆಯದೆ ಪರದಾಡುತ್ತಿದ್ದಾರೆ, ತೋಟ ನಿರ್ವಹಣೆ ಮಾಡಲಾಗದೆ ಕೈಚೆಲ್ಲುತ್ತಿದ್ದಾರೆ, ಈಗಾಗಲೇ ನಿರ್ವಹಣೆ ಮಾಡಲಾಗದೆ 50 ಸಾವಿರ ಎಕರೆಯಷ್ಟು ಅರೇಬಿಕ ತೋಟಗಳು ನಾಶವಾಗಿವೆ ಎಂದು ಹೇಳಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದು, ಮತ್ತು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಧನಿಯೆತ್ತದೆ ಇರುವುದು ಇದಕ್ಕೆ ಮೂಲ ಕಾರಣ ಎಂದು ದೂರಿದ್ದಾರೆ.










