ಚಿಕ್ಕಮಗಳೂರು: ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಭಾನುವಾರ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಜನ್ಮದಿನದ ಪ್ರಯುಕ್ತ ಶ್ರೀಮಠದಲ್ಲಿ ನಸುಕಿನಲ್ಲಿ ವೇದಘೋಷ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೋಮ ಜರುಗಿತು.
ಭಕ್ತರಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ನಾಮಸಂಕೀರ್ತನೆ ನಡೆಯಿತು, ಹೋಮದ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಇದೇ ವೇಳೆ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕ ಶುಭವ್ರತ ಪ್ರಾಣಾ ಮಾತಾಜಿ ಶ್ರೀ ರಾಮಕೃಷ್ಣಪರಮಹಂಸರು, ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ತತ್ವ ಮತ್ತು ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾದವುಗಳು ಎಂದರು.
ವಿವೇಕಾನಂದರ ವೀರವಾಣಿ ಇಂದಿನ ಯುವಜನತೆಗೆ ದಾರಿದೀಪವಾಗಬೇಕು, ಅವರ ತತ್ವ ಮತ್ತು ಸಂದೇಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬಜರಂಗದಳದ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಮಾತನಾಡಿ ಸನಾತನ ಧರ್ಮ ಮತ್ತು ಭಾರತದ ಉದಾತ್ತ ಸಂಸ್ಕøತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಮಹಾನ್ ಶಕ್ತಿ ಸ್ವಾಮಿ ವಿವೇಕಾನಂದರು, ಅವರಿಂದಾಗಿ ಇಡೀ ವಿಶ್ವ ಭಾರತದತ್ತ ನೋಡುವಂತಾಯಿತು ಎಂದು ಹೇಳಿದರು.
ವಿವೇಕಾನಂದರ ಬದುಕು ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದ ಗಾಯಕಿ ರೇಖಾ ಪ್ರೇಮ್‍ಕುಮಾರ್ ರಾಮಕೃಷ್ಣಪರಮಹಂಸರು, ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಬದುಕೇ ಮಾನವ ಸಂಕುಲಕ್ಕೆ ನೀತಿ ಪಾಠವಾಗಿದೆ ಎಂದರು.
ಜನ್ಮದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ಶ್ರೀಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು, ಶ್ರೀ ಶಿವಪ್ರಿಯ ಪ್ರಾಣಾ, ಶ್ರೀ ಅಜಿತ ಪ್ರಾಣಾ ಮಾತಾಜಿ ಮತ್ತು ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ ಹಾಜರಿದ್ದರು.










