ಚಿಕ್ಕಮಗಳೂರು : ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು : ಐ.ಬಿ.ಶಂಕರ್.

384
firstsuddi

ಚಿಕ್ಕಮಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿಂತನೆ, ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಸಲಹೆ ಮಾಡಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹಕ್ಕೆ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸೇರಿದಂತೆ ಎಲ್ಲದಕ್ಕೂ ತಳಪಾಯ ಹಾಕಿದವರು ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಅವರ ಬದುಕೇ ಎಲ್ಲರಿಗೂ ಸಂದೇಶ, ಅಂತಹ ಮಹಾತ್ಮನನ್ನು ನಾವು ಟಿ.ವಿ, ಕಂಪ್ಯೂಟರ್ ಮತ್ತು ಮೊಬೈಲ್ ನಡುವೆ ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.
ಟಿ.ವಿ ಬಂದ ನಂತರ ನಮ್ಮ ಬದುಕು ಬದಲಾಗಿದೆ ನಮ್ಮ ಜೀವನಕ್ಕೆ ಅದು ಮಾರಕವಾಗಿದೆ, ಟಿ.ವಿ ಯಿಂದಾಗಿ ಓದುವುದು ಸೇರಿದಂತೆ ಎಲ್ಲವನ್ನೂ ನಾವು ಬಿಟ್ಟಿದ್ದೇವೆ ಎಂದ ಅವರು ಇನ್ನಾದರೂ ಇಂದಿನ ಪೀಳಿಗೆ ಅದರಿಂದ ಹೊರಬಂದು ಮಹಾತ್ಮರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶ ಭಕ್ತರ ಬದುಕು ಬರಹವನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಭಾವೈಕ್ಯತೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಹಾತ್ಮಾ ಗಾಂಧೀಜಿಯವರ ಸಂದೇಶವಾದ ಸತ್ಯ ಮತ್ತು ಅಹಿಂಸೆಯನ್ನು ಎಲ್ಲರೂ ಪಾಲಿಸಿದರೆ ದೇಶದಲ್ಲಿ ದ್ವೇಷ, ಹಿಂಸೆ, ಗಲಭೆ ನಿಲ್ಲುತ್ತವೆ, ಈಶ್ವರ ಅಲ್ಲಾ ತೇರೇ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್ ಸಂದೇಶವನ್ನು ಮೈಗೂಡಿಸಿ ಕೊಂಡಲ್ಲಿ ಭಾವೈಕ್ಯತೆ ತಾನಾಗಿಯೇ ಬೆಳೆಯುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕೊರೋನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು, ವಿಜೇತರಿಗೆ ಅವರ ಮನೆಗೇ ತೆರಳಿ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್ ಭಾವೈಕ್ಯತೆಯನ್ನು ಬೆಳೆಸುವ ಕುರಿತು ಪ್ರಮಾಣ ವಚನ ಬೋಧಿಸಿದರು. ಸೇವಾದಳದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಕಡೂರು ತಾಲ್ಲೂಕು ಬಿಳುವಾಲ ಸರ್ಕಾರಿ ಶಾಲೆಯ ಶಿಕ್ಷಕ ಪಾಂಡುಕುಮಾರ್ ಮತ್ತು ಕುರುವಂಗಿ ಶಾಲೆಯ ಶಿಕ್ಷಕ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕಿ ಸಾವಿತ್ರಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.