ಬೆಂಗಳೂರು : ಕಾರವಾರ-ಯಶವಂತಪುರ-ವಾಸ್ಕೋ ಮಾರ್ಗದ ನಡುವೆ ಸಂಚರಿಸುವ ನೂತನ ಎಕ್ಸ್ಪ್ರೆಸ್ ರೈಲಿಗೆ ಇಂದು ಮುಕ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು. ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲನ್ನು ಎಲ್ಹೆಚ್ಬಿ ಕೋಚ್ಗಳಾಗಿ ಪರಿವರ್ತನೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಈ ರೈಲು ಪ್ರತಿ ದಿನ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ರಾತ್ರಿ 9:15ಕ್ಕೆ, ಪಡೀಲ್ ಗೆ ಮುಂಜಾನೆ 3ಕ್ಕೆ, ಉಡುಪಿಗೆ ಬೆಳಿಗ್ಗೆ 5ಕ್ಕೆ, ಕುಂದಾಪುರ 5:30ಕ್ಕೆ, ಕಾರವಾರಕ್ಕೆ ಬೆಳಿಗ್ಗೆ 8:30ಕ್ಕೆ ಹಾಗೂ ವಾಸ್ಕೋಗೆ ಬೆಳಿಗ್ಗೆ 10:ಕ್ಕೆ ತಲುಪಲಿದೆ. ಬಳಿಕ ವಾಸ್ಕೋದಿಂದ ಸಂಜೆ 5:20ಕ್ಕೆ ಹೊರಡಲಿದ್ದು, ಕಾರವಾರಕ್ಕೆ ಸಂಜೆ 7:25ಕ್ಕೆ, ಕುಂದಾಪುರಕ್ಕೆ 9:30ಕ್ಕೆ, ಉಡುಪಿಗೆ 10ಕ್ಕೆ, ಯಶವಂತಪುರಕ್ಕೆ ಬೆಳಿಗ್ಗೆ 8ಕ್ಕೆ ತಲುಪಲಿದೆ.
ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಯಶವಂತಪುರ-ಕಾರವಾರ-ವಾಸ್ಕೋ ಮಾರ್ಗದಲ್ಲಿ ಇಂದು ಹೊಸ ರೈಲು ಚಾಲನೆ ನೀಡಿರುವುದು ಸಂತಸ ತಂದಿದೆ. ಈ ರೈಲು ಸಂಜೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಕಾರವಾರಕ್ಕೆ ತಲುಪಲಿದೆ. ಹೊಸ ರೈಲು ಸಂಚಾರದಿಂದ ಶಿರಾಡಿಘಟ್ ಮೇಲಿನ ವಾಹನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ನಾನು ಮುಖ್ಯಮಂತ್ರಿಯಾದ ಪ್ರಾರಂಭದಲ್ಲಿ ರೈಲ್ವೆ ಯೋಜನೆಗಳಿಗೆ ಭೂಮಿ, ಅರ್ಧ ವೆಚ್ಚ ಭರಿಸುವ ಭರವಸೆಯನ್ನು ನೀಡಿದ್ದೆ. ಸರ್ಕಾರ ರೈಲ್ವೆ ಯೋಜನೆಗಳೀಗೆ ಸದಾ ಬೆಂಬಲ ಕೊಡುತ್ತದೆ. ಮುಂಬರುವ ದಿನಗಳ್ಲಿ ಮತ್ತಷ್ಟು ಹೊಸ ರೈಲುಗಳ ಸೇವೆ ಸಿಗಲಿದೆ ಎಂದರು.
ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರು ರಾಣಿ ಚೆನ್ನಮ್ಮ ಅವರ ರೀತಿಯಲ್ಲಿ ಹೋರಾಡಿ ಈ ಹೊಸ ರೈಲು ಸಂಚರಿಸಲು ಕಾರಣರಾಗಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಲೋಕೊಪೈಲಟ್ಗಳಿಂದ ರೈಲು ಚಾಲನೆ ಮಾಡಲಾಗುತ್ತಿದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಇನ್ನೂ ಕೆಲವು ಜಿಲ್ಲೆಗಳಿಗೆ ರೈಲು ಸೇವೆ ದೊರೆತಿಲ್ಲ. ನಾನು ಪ್ರತಿನಿಧಿಸುವ ಚಿಕ್ಕಮಗಳೂರಿಗೆ ರೈಲು ಬಂದಿದ್ದೇ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ. ಹಬ್ಬಗಳು ಬಂದರೆ ನಮ್ಮ ಭಾಗದ ಜನರು ಟಿಟಿ ವಾಹನಗಳನ್ನು ಮಾಡಿಕೊಂಡು ಊರಿಗೆ ತೆರಳಬೇಕಿತ್ತು. ಬೆಂಗಳೂರಿನಲ್ಲಿ ಕರಾವಳಿಯ ಸಾಕಷ್ಟು ಮಂದಿ ಇದ್ದಾರೆ. ಆದರೆ ನಮ್ಮ ಊರುಗಳಿಗೆ ತೆರಳಲು ರೈಲು ಸೇವೆ ಇರಲಿಲ್ಲ. ಇಂದು ನಮ್ಮ ಭಾಗದ ಜನರ ನಿರೀಕ್ಷೆ ಈಡೇರಿದೆ. ಈ ರೈಲು ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಸಂಚರಿಸಲಿದೆ. ಈ ಸಂದರ್ಭದಲ್ಲಿ ನಾನು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.










