ಮೂಡಿಗೆರೆ: ರೊಬಸ್ಟಾ ಕಾಫಿ ಫಸಲು ಕಾರ್ಮಿಕರ ಕೊರತೆಯಿಂದ ಗಿಡದಲ್ಲಿ ಹಣ್ಣಾಗಿ ಒಣಗುತ್ತಿದ್ದು ಕಾಫಿ ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟದ ಹಾದಿ ತುಳಿಯುತ್ತಿದ್ದಾರೆ ಎಂದು ಕಾಫಿ ಬೆಳೆಗಾರರ ತಾಲೂಕು ಅಧ್ಯಕ್ಷ ಬಾಲಕೃಷ್ಣಬಾಳೂರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೊಬಸ್ಟಾ ಕಾಫಿ ಫಸಲು ಫೆಬ್ರವರಿಯಲ್ಲಿ ಕೊಯ್ಲು ಮಾಡುವುದು ಸಾಮಾನ್ಯವಾಗಿತ್ತು. ಆದರೆ ಕೆಲವು ವರ್ಷಗಳಿಂದ ವಾತಾವರಣದ ವೈಪರಿತ್ಯದಿಂದಾಗಿ ಫಸಲು ಜನವರಿ ತಿಂಗಳಿನಲ್ಲಿ ಕೊಯ್ಯುವಂತಾಗಿದೆ. ಅದರ ನಡುವೆ ಅರೇಬಿಕಾ ಕಾಫಿ ಫಸಲು ಕೂಡ ಕೊಯ್ಲು ಮಾಡುವ ಸಮಯವಾಗಿದ್ದು, ಬೆಳೆಗಾರರು ಕಾರ್ಮಿಕರ ಕೊರತೆಯಿಂದ ಗಿಡದಿಂದ ಫಸಲು ತೆಗೆಯಲು ಚಿಂತಾಕ್ರಾಂತರಾಗಿದ್ದಾರೆ. ಹಾಗೂ ಫಸಲು ಕೊಯ್ಯಲು ಕಾರ್ಮಿಕರ ಕೊರತೆಯಿಂದ ಗಿಡದಲ್ಲೇ ಒಣಗಿ ನೆಲಕ್ಕೆ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲವು ವರ್ಷಗಳಿಂದ ಅಸ್ಸಾಂ ಕಾರ್ಮಿಕರು ಹಾಗೂ ಉತ್ತರ ಕರ್ನಾಟಕದಿಂದ ಬಂದು ಕಾರ್ಮಿಕರ ಕೊರತೆಯನ್ನು ನೀಗಿಸುತ್ತಿದ್ದರು. ಆದರೆ ಇತ್ತೀಚೆಗೆ ಅಸ್ಸಾಂ ಕಾರ್ಮಿಕರು ರಾಜ್ಯಕ್ಕೆ ಬರುವುದು ಕಡಿಮೆಯಾಗಿದೆ. ಇನ್ನು ಉತ್ತರ ಕರ್ನಾಟಕದ ದಾವಣಗೆರೆ, ಹಾವೇರಿ, ಹಡಗಲಿ ಕಡೆಯ ಕಾರ್ಮಿಕರು ಆ ಭಾಗದಲ್ಲಿ ಮಳೆಯಾಗಿರುವುದರಿಂದ ಕೆಲಸಕ್ಕಾಗಿ ಗುಳೆ ಬರುತ್ತಿರುವುದು ಕಡಿಮೆಯಾಗಿದೆ.ಅಲ್ಲಿಯ ರೈತರು ಅವರವರ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಮಲೆನಾಡಿಗರಿಗೆ ಕಾರ್ಮಿಕರ ಕೊರತೆಯ ಭೀತಿ ಎದುರಾಗಿದೆ.
ಮಲೆನಾಡಿನ ಕಾಫಿ ಬೆಳೆ ಹಣ್ಣಾಗಿ ಒಣಗಿ ನಿಂತಿರುವ ಕಾಫಿ ಫಸಲು ತೆಗೆಯಲು ಕಾರ್ಮಿಕರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದು, ಹೆಚ್ಚಿನ ಸಂಬಳಕ್ಕೆ ಡಿಮಾಂಡ್ ಮಾಡುತ್ತಿದ್ದಾರೆ.ಕಳೆದ ಬಾರಿ ಕಾರ್ಮಿಕರಿಗೆ 250 ರಿಂದ 275 ರೂ ಸಂಬಳ ನೀಡುತ್ತಿದ್ದರು. ಈ ಬಾರಿ ಕಾರ್ಮಿಕರ ಕೊರತೆಯ ಲಾಭ ಪಡೆದ ಕೆಲಸಗಾರರು ಕಾಫಿ ಫಸಲು ಕೊಯ್ಯಲು 300 ರಿಂದ 400 ರೂ ವರೆಗೆ ಸಂಬಳದ ಡಿಮಾಂಡ್ ಮಾಡುತ್ತಿದ್ದಾರೆ. ಹಾಗೂ ಬುಷಲ್ ಗೆ 90-100 ರೂ ವರೆಗೂ ಸಂಬಳ ಕೇಳುತ್ತಿರುವುದು ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕಡಿಮೆ ಬೆಲೆ, ಕಡಿಮೆ ಇಳುವರಿ, ಕಾಡು ಪ್ರಾಣಿಗಳ ಹಾವಳಿ,ಕೊಳೆರೋಗ,ಕಾಫಿಗೆ ತಗಲುವ ರೋಗ ಬೆರಿಬೋರರ್ ಇನ್ನು ಹಲವು ಸಮಸ್ಯೆಗಳ ನಡುವೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಎದುರಾಗಿದ್ದು,ಕೂಡಲೇ ಸರ್ಕಾರ ಬೆಳೆಗಾರರ ನೆರವಿಗೆ ಮುಂದಾಗಿ ಬೆಂಬಲ ಬೆಲೆ ನೀಡುವ ಮೂಲಕ ಕಾಫಿ ಬೆಳೆಗಾರರನ್ನು ಕಷ್ಟದಿಂದ ಪಾರು ಮಾಡಬೇಕಾಗಿದೆ ಎಂದರು.










