ಸಂಸತ್ ಆವರಣದಲ್ಲಿ ಸಿಎಎ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ…

202
firstsuddi

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಇಂದು ಸಂಸತ್ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಅಹಮದ್ ಪಟೇಲ್, ಎ.ಕೆ. ಆಂಟನಿ, ಮೋತಿಲಾಲ್ ವೋರಾ ಹಾಗೂ ಕಾಂಗ್ರೆಸ್ ಸಂಸದರು ಪಾಲ್ಗೊಂಡಿದ್ದು, ಈ ವೇಳೆ ಸಂವಿಧಾನ ಉಳಿಸಿ, ಭಾರತವನ್ನು ರಕ್ಷಿಸಿ ಎಂಬ ಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಅಲ್ಲದೇ ಸಂಸತ್‍ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಹುಲ್ ಗಾಂಧಿ ಅವರು, ನಿನ್ನೆ ಜಾಮಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಗೆ ಆ ರೀತಿ ಹಿಂಸಾಚಾರ ನಡೆಸಲು ಹೇಳಿದ್ದು ಯಾರು? ಆ ವ್ಯಕ್ತಿಗೆ ಹಣ ನೀಡಿದವರು ಯಾರು ಎಂದು ಪ್ರಶ್ನಿಸಿದರು.