ಚಿಕ್ಕಮಗಳೂರು : ಸಚಿವ ಸಿ.ಟಿ. ರವಿ ಅವರಿಗೆ ಯಾವತ್ತೂ ಸತ್ಯ ಹೇಳಿ ಗೊತ್ತಿಲ್ಲ, ಅವರು ಸುಳ್ಳು ಹೇಳುವುದನ್ನೇ ಮೈಗೂಡಿಸಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸಿ.ಟಿ. ರವಿ ಅವರಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಅವರು ಸುಳ್ಳು ಹೇಳುವುದನ್ನೇ ಮೈಗೂಡಿಸಿಕೊಂಡಿದ್ದಾರೆ. ಹಳ್ಳಿಗಳಿಗೆ ತೆರಳಿ ಕ್ಷೇತ್ರ ಅಭಿವೃದ್ಧಿ ಬಗ್ಗೆ ಜನರನ್ನು ಕೇಳೋಣ. ಜನರು ಏನು ಹೇಳುತ್ತಾರೆಂದು ತಿಳಿಯುತ್ತದೆ. ಸಿ.ಟಿ. ರವಿ ಅವರು ಕೇವಲ ಅವರ ಅಭಿವೃದ್ಧಿಯನ್ನು ಮಾಡಿಕೊಂಡಿದ್ದಾರೆಯೇ ಹೊರತು ಜನರ ಅಭಿವೃದ್ದಿಯನ್ನು ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯಪಾಲರ ಭಾಷಣ ನಾಡಿನ ಮತ್ತು ಜನತೆಯ ಹಿತಾಸಕ್ತಿಯ ಪರವಾಗಿ ಇದ್ದರೆ ನಾವು ಪ್ರತಿಭಟಿಸುವಂತಹ ಪ್ರಮೇಯವೇ ಬರುವುದಿಲ್ಲ. ಭಾಷಣದಲ್ಲಿ ಆಕ್ಷೇಪಾರ್ಹ ವಿಚಾರಗಳು ಇದ್ದರೆ ಖಂಡಿತಾ ವಿರೋಧಿಸುತ್ತೇವೆ, ಆಗ ನಮ್ಮ ಬಾಯಿ ಮುಚ್ಚಿಸೋಕೆ ಸಾಧ್ಯವಿಲ್ಲ. ಕಳೆದ ಬಾರಿ ಕೇಂದ್ರದ ಬಜೆಟ್ ಗಾತ್ರ ರೂ.27 ಲಕ್ಷ ಕೋಟಿಯಾಗಿತ್ತು, ಅದರಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ಖರ್ಚಾಗಿದೆ ಎಂಬುದು ನಾಳೆ ತಿಳಿಯುತ್ತೆ. 6 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿ ಮೋದಿಯವರು ನೀಡಿದ ಭರವಸೆ ಎಲ್ಲವೂ ಈಡೇರಿದ್ದರೆ ಈಗಾಗಲೇ ಸ್ವರ್ಗ ಸೃಷ್ಟಿಯಾಗಿರಬೇಕಿತ್ತು. ಬಿಜೆಪಿಯವರು ಸ್ವರ್ಗ ಸೃಷ್ಟಿ ಮಾಡ್ತೀವಿ ಅಂತ ಹೇಳಿ ದೇಶವನ್ನು ನರಕ ಮಾಡಿದ್ದಾರೆ. ದೇಶದ ನಿರುದ್ಯೋಗ ಸಮಸ್ಯೆ, ಹಸಿವು, ಜಿಡಿಪಿ ಕುಸಿತ, ಭ್ರಷ್ಟಾಚಾರದ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಉತ್ಪಾದನೆ ಕುಸಿತ, ಇಳಿಕೆಯಾಗುತ್ತಿರುವ ರಫ್ತು ಪ್ರಮಾಣದ ಬಗ್ಗೆ ಮಾತನಾಡಲಿ. ದೇಶದ ಈ ದುಸ್ಥಿತಿಗೆ ಕಾರಣ ಯಾರು?
ನಿನ್ನೆ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಪರಿಚಿತ ವ್ಯಕ್ತಿ ಒಬ್ಬ ಗುಂಡಿನ ದಾಳಿ ನಡೆಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ‘ಈಶ್ವರ್ ಅಲ್ಲಾ ತೇರೆ ನಾಮ್ ಸಬ್ಕೋ ಸನ್ಮತಿ ದೇ ಭಗವಾನ್’ ಎಂದು ಸೌಹಾರ್ದತೆ ಸಾರಿದ ಕಾರಣಕ್ಕಾಗಿ ಮಹಾತ್ಮ ಗಾಂಧಿಯವರನ್ನು ಸಂಘಪರಿವಾರ ಗುಂಡಿಟ್ಟು ಕೊಂದಿತ್ತು. ಈಗ ಅದೇ ಸಂಘಟನೆಗೆ ಸೇರಿದ ಗೂಂಡಾ ಒಬ್ಬ ಜಾಮಿಯಾ ವಿಶ್ವವಿದ್ಯಾಲಯದ ಮೌನ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾನೆ. ಸೌಹಾರ್ದತೆ ಎಂದರೆ ಬಿಜೆಪಿಗೆ ಏಕಿಷ್ಟು ಭಯ? ಮಹಾತ್ಮ ಗಾಂಧಿಯವರ ಸಮಾಧಿಸ್ಥಳ ರಾಜ್ಘಾಟ್ಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕಣ್ಣೆದುರೇ ಗೂಂಡಾ ಒಬ್ಬ ಗುಂಡು ಹಾರಿಸಿದ್ರೂ ಪೊಲೀಸರು ಮೌನವಾಗಿದ್ರು. ಗೂಂಡಾವೊಬ್ಬನಿಗೆ ಇಷ್ಟು ಧೈರ್ಯ ಬರಲು ಹೇಗೆ ಸಾಧ್ಯ? ಇದಕ್ಕೆ ಯಾರ ಬೆಂಬಲವಿದೆ? ಎಂಬುದರ ಬಗ್ಗೆ ಮೊದಲು ತನಿಖೆಯಾಗಬೇಕು. ದೇಶ ವಿನಾಶದತ್ತ ಸಾಗುತ್ತಿದೆ. ಸಮಾಜಘಾತುಕರು, ಗೂಂಡಾಗಳೆಲ್ಲ ದೇಶಪ್ರೇಮದ ಸೋಗಿನಲ್ಲಿ ಅಮಾಯಕರ ಹತ್ಯೆಗೆ ನಿಂತಿದ್ದಾರೆ. ಇಂಥ ಹತ್ಯೆಗಳಿಗೆ ಸರ್ಕಾರವೂ ಬೆಂಬಲಿಸುತ್ತಿರುವುದು ದೇಶದ ಕರಾಳ ದಿನಗಳನ್ನು ಖಾತ್ರಿಪಡಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.










