ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ದೇಶದಲ್ಲೇ ಕೊರೊನಾ ವೈರಸ್ನಿಂದ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದ್ದು, ಈ ಹಿನ್ನೆಲೆ ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ಮತ್ತು ಮದುವೆ, ಸಭೆ-ಸಮಾರಂಭಗಳನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ವೈರಸ್ನಿಂದ ಕಲಬುರಗಿಯ ವೃದ್ಧ ಸಾವನ್ನಪ್ಪಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲೂ ಕೊರೊನಾ ವೈರಸ್ ಹರಡುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಸಭೆಯಲ್ಲಿ ವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಇದಕ್ಕೆ ಜನಸಾಮಾನ್ಯರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದಾಗಿ ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್ಗಳು, ಚಿತ್ರಮಂದಿರಗಳು, ಕ್ಲಬ್, ಪಬ್ಸ್, ಸಮ್ಮರ್ ಕ್ಯಾಂಪ್, ಹುಟ್ಟುಹಬ್ಬ, ಎಂಗೇಜ್ಮೆಂಟ್, ಮದುವೆ, ಕ್ರೀಡಾ ಚಟುವಟಿಕೆಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗಿದ್ದು, ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೇ ಮದುವೆ ಸಮಾರಂಭಗಳಲ್ಲಿ ಕೇವಲ 100 ಮಂದಿಗೆ ಆಹ್ವಾನವಿದ್ದರೆ ಮಾತ್ರ ಮದುವೆ ಕಾರ್ಯಕ್ರಮವನ್ನು ಮಾಡಬಹುದು. ಹೆಚ್ಚು ಮಂದಿ ಸೇರುವ ಕಾರ್ಯಕ್ರಮವನ್ನು ಮುಂದೂಡಬೇಕು. ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ವಸತಿ ನಿಲಯಗಳು ಬಂದ್ ಆಗಲಿವೆ. ಹಾಗೂ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ತಿಳಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಕೊರೋನಾ ವೈರಸ್ ಹರಡದಂತೆ ತಡೆಯಲು ಮಾಲ್ ಗಳು, ಚಿತ್ರಮಂದಿರಗಳು ಹಾಗೂ ಎಲ್ಲಾ ಹವಾನಿಯಂತ್ರಿತ ಜಾಗಗಳನ್ನು ಬಂದ್ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಅವರು ಸರ್ಕಾರವನ್ನು ಒತ್ತಾಯಿಸಿದ್ದರು.










