ಹುಬ್ಬಳ್ಳಿ : ಚೀನಾದಿಂದ ಆರಂಭವಾದ ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವದಾಧ್ಯಂತ ವ್ಯಾಪಕವಾಗಿ ಹರಡಿ ಭೀತಿ ಹೆಚ್ಚಿಸುತ್ತಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಭಾರತವನ್ನು ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಲಾಕ್‍ಡೌನ್ ನಿಂದಾಗಿ ರೈತರು ಬೆಳೆದ ಬೆಳೆಗಳ ಬೆಲೆ ಕಡಿಮೆಯಾಗಿ ಬೆಳೆಗಳು ಮಾರಾಟವಾಗದೆ ಇದ್ದುದರಿಂದ ಕೆಲವು ರೈತರು ತಾವು ಬೆಳೆದ ಬೆಳೆಗಳನ್ನು ತಿಪ್ಪೆಗೆ ಎಸೆಯುತ್ತಿದ್ದರೆ, ಇನ್ನು ಕೆಲ ರೈತರು ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ರೈತ ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ 1 ಲಕ್ಷ ರೂ ಹಣವನ್ನು ದೇಣಿಗೆಯಾಗಿ ನೀಡಿ ಉಳಿದ ರೈತರಿಗೆ ಮಾದರಿಯಾಗಿದ್ದಾರೆ. ಧಾರವಾಡದ ಗುಲಗಂಜಿಕೊಪ್ಪ ಗ್ರಾಮದ ನಿವಾಸಿ ಸದಾನಂದ ಶಿವಳ್ಳಿ ಎಂಬುವವರು ಲಾಕ್‍ಡೌನ್ ನಿಂದಾಗಿ ರಾಜ್ಯದ ಅನೇಕರು ಹಸಿವಿನಿಂದ ಬಳಲುತ್ತಿದ್ದು, ಅವರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಮುಖಾಂತರ 1 ಲಕ್ಷ ರೂ ಚೆಕ್‍ನ್ನು ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.










