ಮೂಡಿಗೆರೆ : ಕೊರೋನಾ ಮಹಾ ಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಗಳನ್ನು ಮತ್ತಷ್ಟು ಬಿಗಿಯಾಗಿಸಿವೆ. ಆದರೂ ಸೋಂಕಿನ ಬಗ್ಗೆ ಅರಿವು ಹೊಂದಿರದ ಹಾಗೂ ಸೋಂಕು ನಿರ್ಲಕ್ಷ್ಯ ಮಾಡುತ್ತಿರುವ ನಾಗರೀಕರಿಗೆ ಉಚಿತವಾಗಿ ಮಾಸ್ಕ್ ನೀಡುವ ಮೂಲಕ ಅರಿವು ಮೂಡಿಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರು ಮೂಡಿಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೂಡಿಗೆರೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಉಚಿತ ಮಾಸ್ಕ್ ವಿತರಣೆ ಕಾರ್ಯ ಮಾಡಿದರು. ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ, ವಿನಾಕಾರಣ ಮಾಸ್ಕ್ ಧರಿಸದೆ, ಯಾವುದೇ ಸ್ವಚ್ಛತಾ ಕ್ರಮಗಳನ್ನು ಪಾಲಿಸದೆ ತಿರುಗಾಡುತ್ತಿದ್ದ ಸಾರ್ವಜನಿಕರ ಬಳಿಗೆ ತೆರಳಿ ಕೊರೋನಾ ಸೋಂಕಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.

ಬಳಿಕ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಒಂದು ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಯಾವುದೇ ದೇಶ, ಭಾಷೆ, ಜಾತಿ, ಹಿರಿಯರು-ಕಿರಿಯರು, ಶ್ರೀಮಂತ-ಬಡವ ಎನ್ನದೆ ಎಲ್ಲರನ್ನೂ ಆಹುತಿಗೆ ತೆಗೆದುಕೊಳ್ಳುತ್ತಿದೆ. ಸ್ವಚ್ಚತೆಯೊಂದಿಗೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮುಖಕ್ಕೆ ಮಾಸ್ಕ್ ಧರಿಸುವುದರಿಂದ ವೈರಾಣುವನ್ನು ಹತೋಟಿಯಲ್ಲಿಡಬಹುದು. ಕೆಲವರಿಗೆ ಇದರ ಅರಿವು ಇದ್ದರೂ ಸಹ ಮಾಸ್ಕ್ ಕೊಳ್ಳುವ ಸಾಮರ್ಥ್ಯ ಇರವುದಿಲ್ಲ. ಅಂಥಹವರನ್ನು ಗುರುತಿಸಿ ಮಾಸ್ಕ್ ವಿತರಣೆ ಮಾಡಲಾಗಿದೆ ಎಂದರು.

ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ತೆರಳಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮನವಿ ಮಾಡಿ, ಸಾರ್ವಜನಿಕರಿಗೆ ತಿಳಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಯಿತು. ಇತ್ತ ಹಗಲಿರುಳು ಎನ್ನದೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರಿಗಾಗಿ ತಮ್ಮ ಜೀವದ ಹಂಗು ತೊರೆದು ರಸ್ತೆ ಬಳಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಪೋಲೀಸರಿಗೆ ಸ್ಯಾನಿಟೈಸರ್, ಮಾಸ್ಕ್, ಕುಡಿಯುವ ನೀರು ವಿತರಿಸಲಾಯಿತು.
ಕಾರ್ಯಕ್ರಮದ ನಡುವೆ ಹಲವು ಚೆಕ್ಪೋಸ್ಟ್ಗಳಲ್ಲಿ ಮಾಸ್ಕ್ ಧರಿಸದೆ ಬರುತ್ತಿದ್ದ ವಾಹನ ಸವಾರರಿಗೂ ಮಾಸ್ಕ್ ನೀಡಿ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ತಿಳುವಳಿಕೆ ನೀಡಲಾಯಿತು. ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ವಿತರಿಸಲಾಯಿತು. ಇತರೆ ರಾಜಕಾರಣಿಗಳಂತೆ ಮನೆಯಲ್ಲಿ ಕುಳಿತುಕೊಳ್ಳದೆ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅಜಿತ್ಕುಮಾರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. 
ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಕೆಸವಳಲು ರಾಘವೇಂದ್ರ, ಜಯಕರ್ನಾಟಕ ತಾಲ್ಲೂಕು ಉಪಾಧ್ಯಕ್ಷ ಬಿಳ್ಳೂರು ಮುರಳಿ, ಮೂಡಿಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಬಿ.ಟಿ, ಸಂಘಟನಾ ಕಾರ್ಯದರ್ಶಿ ಕಡಿದಾಳ್ ಪುನೀತ್, ಅಮರ್ಥ್ಯ ಅಜಿತ್ ಕುಮಾರ್, ಹಿರಿಯ ಪತ್ರಕರ್ತ ಸುಂದರ ಬಂಗೇರ ಅವರು ಪಾಲ್ಗೊಂಡಿದ್ದರು.









