ನಾವು ಸೇವಿಸುವ ಆಹಾರ ಒಮ್ಮೊಮ್ಮೆ ದೇಹದ ಸ್ಥಿತಿಗತಿಗಳ ಮೇಲೆ ವಿಪರೀತವಾದ ಪರಿಣಾಮವನ್ನುಂಟು ಮಾಡುತ್ತದೆ. ಫುಡ್ ಪಾಯ್ಸನ್‍ಗೆ ಒಳಗಾದಾಗ ಅದರ ಪರಿಣಾಮ ನೇರವಾಗಿ ಗಂಟೆಗಳು ಕಳೆಯುವುದರೊಳಗಾಗಿ ಕಂಡು ಬರುತ್ತದೆ. ಆದರೆ ಅಲ್ಪ ಪ್ರಮಾಣದಲ್ಲಿ ವಿಷಕಾರಕ ವಸ್ತುಗಳನ್ನು ಹೊಂದಿರುವ ಆಹಾರದ ಪರಿಣಾಮ ತಕ್ಷಣಕ್ಕೆ ಕಾಣಿಸಿಕೊಳ್ಳದೇ ಇರುವುದರಿಂದ ನಾವು ಅದರ ಬಳಕೆಯನ್ನು ಮುಂದುವರೆಸುತ್ತೇವೆ.
ಯಾವುದೋ ಒಂದು ದಿನ ನಾವು ಕಾಯಿಲೆಗೊಳಗಾದಾಗ ಅದಕ್ಕೆ ನಿರ್ದಿಷ್ಟವಾದ ಆಹಾರ ಸೇವನೆ ಕಾರಣ ಎಂದು ತಿಳಿದಾಗ ವಿಷಾಧ ಪಡುವಂತಾಗುತ್ತದೆ. ಹಾಗಾಗಿ ಆಹಾರದ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು.
ಡಯಟ್ ಮಾಡುವವರು ಸಾಮಾನ್ಯವಾಗಿ ಸೇವಿಸುವ ಕೆಲವು ಬಗೆಯ ಆಹಾರಗಳು ಜೀರ್ಣಕ್ರಿಯೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಕೆಲವರು ಡಯಟ್ ಮಾಡುವಾಗ ಜಂಕ್ ಫುಡ್‍ಅನ್ನು ಸೇವಿಸುತ್ತಾರೆ. ಜಂಕ್‍ಫುಡ್‍ನಲ್ಲಿ ಕ್ಯಾಲೋರಿ ಹೆಚ್ಚಾಗಿರುವುದರಿಂದ ಡಯಟ್ ಸಂದರ್ಭದಲ್ಲಿ ಉಂಟಾಗುವ ನಿಶ್ಯಕ್ತಿ, ಸುಸ್ತು, ಆಯಾಸವನ್ನು ಸುಲಭವಾಗಿ ಎದುರಿಸಬಹುದಾಗಿದೆ. ಹಾಗೆಂದು ಜಂಕ್‍ಫುಡ್ ಸೇವನೆಯಿಂದ ಹೆಚ್ಚಿನ ಪೌಷ್ಠಿಕಾಂಶ, ವಿಟಮಿನ್, ಪ್ರೊಟೀನ್‍ಗಳು ದೊರೆತು ದೇಹ ಇನ್ನಷ್ಟು ದೃಢವಾಗುತ್ತದೆ ಎಂದುಕೊಂಡಿದ್ದರೆ ಅದು ತಪ್ಪು ಭಾವನೆಯಾಗಿದೆ.
ಜಂಕ್‍ಫುಡ್‍ಅನ್ನು ಸೇವಿಸಿದಾಗ ಗ್ಲುಕೋಸ್ ಅನ್ನು ಅಕ್ಸಡೈಸ್‍ಗಳಾಗಿ ಪರಿವರ್ತಿಸುವ ಮಾಂಸ ಖಂಡಗಳ ಸಾಮರ್ಥ್ಯ ಕಡಿಮೆಯಾಗುತ್ತದೆ. ಸಾಮಾನ್ಯವಾದ ಸನ್ನಿವೇಶಗಳಲ್ಲಿ ಮಾಂಸಖಂಡಗಳು ಗ್ಲೂಕೋಸನ್ನು ಒಡೆಯುತ್ತದೆ ಅಥವಾ ಭವಿಷ್ಯಕ್ಕಾಗಿ ಸಂಗ್ರಹಗೊಳ್ಳುತ್ತದೆ. ಆದರೆ ಜಂಕ್ ಫುಡ್‍ಗಳ ಸೇವನೆಯಿಂದ ದೇಹದಲ್ಲಿರುವ ಗ್ಲೂಕೋಸ್ ನ ಪ್ರಮಾಣ ಹೆಚ್ಚಾಗಿ ಮಾಂಸ ಖಂಡಗಳು ಅವುಗಳನ್ನು ಇತರ ಸಂಯುಕ್ತಗಳಾಗಿ ಪರಿವರ್ತಿಸದ ಕಾರಣ ದೇಹದ ತೂಕ ಹೆಚ್ಚಾಗುತ್ತದೆ. ಡಯಾಬಿಟಿಸ್ ಕಾಡುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಆದ್ದರಿಂದ ಉಪವಾಸದ ಸಂದರ್ಭದಲ್ಲಿ ಊಟದ ಬದಲಿಗೆ ನೀವು ಸೇವಿಸುವ ಜಂಕ್‍ಫುಡ್ ಮಾಂಸಖಂಡಗಳ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಊಟದ ಬದಲಿಗೆ ನೀವು ಸೇವಿಸುವ ಜಂಕ್‍ಫುಡ್ ಹೆಚ್ಚು ಸಕ್ಕರೆಯ ಅಂಶವನ್ನು ಹೊಂದಿರುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ವರ್ಧಿಸುತ್ತದೆ. ಪದೇ ಪದೇ ಹೀಗೆ ಊಟದ ಬದಲಿಗೆ ಜಂಕ್‍ಫುಡ್ ಸೇವಿಸಿದಲ್ಲಿ ರಕ್ತದ ಒತ್ತಡ ಹೆಚ್ಚಾಗಬಹುದು. ಇನ್ಸುಲಿನ್ ಮಟ್ಟ ಕುಸಿಯುವುದರಿಂದ ಮತ್ತಷ್ಟು ಹಸಿವೆಯ ಭಾವನೆ ಉಂಟಾಗಬಹುದು. ಹಾಗಾಗಿ ಉಪವಾಸ ಮಾಡುವ ಸಂದರ್ಭದಲ್ಲಿ ಡಯಟ್ ಮಾಡುವಾಗ ಜಂಕ್‍ಫುಡ್ ಬದಲಿಗೆ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.
ಮಹಿಳೆಯರಿಗೆ ಹೆಚ್ಚು ಅಪಾಯಕಾರಿ :
ಇನ್ಸ್ಟಂಟ್ ಫುಡ್ ಮತ್ತು ಜಂಕ್ ಫುಡ್‍ಗಳು ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗಿದೆ. ಅತ್ಯುತ್ತಮವಾದ ಡಯಟ್ ಪದ್ಧತಿ ಹಾಗೂ ಪೌಷ್ಠಿಕ ಆಹಾರದ ಸೇವನೆಯ ಹೊರತಾಗಿ ಜಂಕ್‍ಫುಡ್‍ಗಳನ್ನು ಸೇವಿಸುತ್ತಿದ್ದಲ್ಲಿ ಮೆಟಬಾಲಿಕ್ ಸಿಂಡ್ರೋಮ್ ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜಂಕ್‍ಫುಡ್ ಸೇವಿಸುವ ಮಹಿಳೆಯರಲ್ಲಿ ಉಳಿದ ಸ್ತ್ರೀಯರಿಗಿಂತ ಹೆಚ್ಚಾಗಿ ಪ್ರೊಟೀನ್, ಕ್ಯಾಲ್ಸಿಯಂ, ಪಾಸ್ಪರಸ್, ಐರನ್, ಪೊಟ್ಯಾಷಿಯಂ, ವಿಟಮಿನ್ ಎ, ಸಿ ಯ ಕೊರತೆ ಕಂಡುಬರುತ್ತದೆ. ಜಂಕ್‍ಫುಡ್ ಸೇವಿಸುವ ಮಹಿಳೆಯರಲ್ಲಿ ಸೋಡಿಯಂನ ಪ್ರಮಾಣ ಕೂಡಾ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ.
ಜಂಕ್‍ಫುಡ್‍ಗಳು ದೇಹದಲ್ಲಿ ಜೀರ್ಣವಾಗಿ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿರುವ ಇನ್ಸುಲಿನ್ ಮತ್ತು ಲೆಫ್ಟಿನ್ ಮಟ್ಟ ಹೆಚ್ಚಾಗುತ್ತದೆ. ಸ್ಥೂಲಕಾಯದಿಂದ ಆರಂಭಿಸಿ ಬಹುತೇಕ ಕಾಯಿಲೆಗಳಿಗೆ ಇದುವೇ ಮುನ್ನುಡಿ ಬರೆಯುತ್ತದೆ.
ಸಿಗರೇಟಿನಷ್ಟೇ ಹಾನಿಕಾರಕ :
ಜಗತ್ತಿನಲ್ಲಿ ಸಿಗರೇಟು ಸೇವನೆಗಿಂತ ಸ್ಥೂಲಕಾಯ ಅತಿ ಹೆಚ್ಚು ಕಾಯಿಲೆಗಳಿಗೆ ಕಾರಣವಾಗಿದೆ. ಸ್ಥೂಲಕಾಯವನ್ನು ಉಂಟುಮಾಡುವ ಆಹಾರಗಳ ಪೈಕಿ ಜಂಕ್‍ಫುಡ್ ಪ್ರಮುಖವಾದದು. ದೀರ್ಘಕಾಲ ಸಿಗರೇಟ್ ಸೇದುವುದರಿಂದ ದೇಹದ ಮೇಲೆ ಯಾವೆಲ್ಲಾ ದುಷ್ಪರಿಣಾಮ ಉಂಟಾಗುತ್ತವೆಯೋ ಅದಕ್ಕಿಂತ ಹೆಚ್ಚು ಅಪಾಯ ಜಂಕ್‍ಫುಡ್‍ಗಳ ಸೇವನೆಯಿಂದ ಆಗುತ್ತದೆ. ಅದೇ ಸಿಗರೇಟ್ ಸೇವನೆಯಿಂದ ಆಗುವ ಅಪಾಯಗಳ ಬಗ್ಗೆ ಜನರಿಗೆ ಖಚಿತವಾದ ಮಾಹಿತಿ ಇದೆ. ಜಂಕ್‍ಫುಡ್ ಸುರಕ್ಷಿತವಾದ ಆಹಾರ ಪದಾರ್ಥವೆಂದೇ ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ ಜಂಕ್‍ಫುಡ್‍ಗಳ ಅತಿಯಾದ ಸೇವನೆ ಸಿಗರೇಟ್‍ಗಿಂತ ಹೆಚ್ಚು ಹಾನಿಕಾರಕವಾಗಿದೆ. ಧೂಮಪಾನಕ್ಕಿಂತ ಸ್ಥೂಲಕಾಯದ ಕಾರಣದಿಂದ ವೈದ್ಯರನ್ನು ಹೆಚ್ಚು ಸಂಖ್ಯೆಯ ಜನರು ಭೇಟಿಯಾಗುತ್ತಾರೆ. ಜಗತ್ತಿನಲ್ಲಿರುವ ಹದಿಹರೆಯದವರು ಇದೇ ಪ್ರಮಾಣದಲ್ಲಿ ಜಂಕ್‍ಫುಡ್‍ಗಳ ಸೇವನೆಯನ್ನು ಮುಂದುವರೆಸಿದಲ್ಲಿ 2030ರ ಸುಮಾರಿಗೆ ಅರ್ಧ ಪಾಲು ಯುವಜನತೆ ಸ್ಥೂಲಕಾಯದಿಂದ ನರಳಲಿದ್ದಾರೆ.
ವ್ಯಸನಕಾರಿ :
ನಮಗೆ ಹಸಿವಾದಾಗ ಆಹಾರವನ್ನು ಸೇವಿಸುವಂತೆ ಮಿದುಳು ಸಂದೇಶ ನೀಡುತ್ತದೆ. ಆದರೆ ಜಂಕ್‍ಫುಡ್‍ಗಳ ಸೇವನೆಯಿಂದ ಹಸಿವಾಗದಿದ್ದರೂ ಮಿದುಳು ಕೃತಕವಾಗಿ ಉದ್ದೀಪನಕ್ಕೊಳಗಾಗಿ ಆಹಾರ ಸೇವಿಸುವ ಬಯಕೆಯನ್ನುಂಟು ಮಾಡುತ್ತದೆ. ಉದಾಹರಣೆಗೆ ಆಲೂಗಡ್ಡೆ ಚಿಪ್ಸ್ ಅನ್ನು ಕಾಫಿಯೊಂದಿಗೆ ತಿಂದಿದ್ದರೂ ಸ್ವಲ್ಪ ಹೊತ್ತಿನ ಬಳಿಕ ಮರಳಿ ಸೇವಿಸುವ ಬಯಕೆ ಉಂಟಾಗುತ್ತದೆ. ಎಲ್ಲಾ ಬಗೆಯ ಕುರುಕುಲು ತಿಂಡಿಗಳನ್ನು ಎಷ್ಟು ತಿಂದರೂ ಮತ್ತಷ್ಟು ತಿನ್ನಬೇಕೆಂಬ ಆಸೆಯುಂಟಾಗುತ್ತದೆ. ಇದೊಂದು ವಿಷ ವೃತ್ತದಂತೆ ಕಾಡುತ್ತಾ ಕುರುಕುಲು ತಿಂಡಿಗಳ ಚಪಲವನ್ನು ಹೆಚ್ಚಿಸುತ್ತಾ ನಮ್ಮನ್ನು ಜಂಕ್‍ಫುಡ್ ನ ದಾಸರನ್ನಾಗಿ ಮಾಡುತ್ತದೆ.

ಕೊಕೇನ್‍ಗಿಂತ ಶುಗರ್ ಹೆಚ್ಚು ವ್ಯಸನಕಾರಿಯಾಗಿದೆ. ಪ್ರಯೋಗಾಲಯವೊಂದರಲ್ಲಿ ಇಲಿಗಳ ಮೇಲೆ ಪರೀಕ್ಷೆಯೊಂದನ್ನು ನಡೆಸಲಾಯಿತು. ಸಕ್ಕರೆ, ಕೊಕೇನ್ ಮತ್ತು ನೀರನ್ನು ಅವುಗಳಿಗೆ ಆಹಾರವಾಗಿ ನೀಡಲಾಯಿತು. ಕೆಲವು ದಿನಗಳ ನಂತರ ಸಕ್ಕರೆ, ಕೊಕೇನ್ ಮತ್ತು ನೀರನ್ನು ಹೊಂದಿರುವ ಆಹಾರವನ್ನು ಪ್ರತ್ಯೇಕವಾಗಿ ಅವುಗಳ ಮುಂದೆ ಇರಿಸಲಾಯಿತು.
ಬಹುತೇಕ ಇಲಿಗಳು ಶುಗರ್ ಹೊಂದಿರುವ ಆಹಾರವನ್ನೇ ಆಯ್ಕೆ ಮಾಡಿಕೊಂಡವು! ಮನುಷ್ಯನ ನಾಲಿಗೆಯು ಉಳಿದ ಎಲ್ಲಾ ಬಗೆಯ ರುಚಿಗಳಿಗಿಂತ ಸಿಹಿಯನ್ನು ಬೇಗನೆ ಗ್ರಹಿಸಿ ಮಿದುಳಿಗೆ ಸಂದೇಶವನ್ನು ಕಳಿಸುತ್ತದೆ. ಆದ್ದರಿಂದ ನಾವು ಸಿಹಿಯ ಅಂಶವನ್ನು ಹೊಂದಿರುವ ಜಂಕ್‍ಫುಡ್ ಅನ್ನು ಹೆಚ್ಚಾಗಿ ಸೇವಿಸುತ್ತಾ ಅದರ ದಾಸ್ಯಕ್ಕೆ, ಬಿಟ್ಟಿರಲಾರದ ಸೇವನೆಗೆ ಒಳಗಾಗುವಂತಾಗುತ್ತದೆ.
ಜಂಕ್‍ಫುಡ್‍ಗಳನ್ನು ನಾವು ಇಷ್ಟಪಟ್ಟು ಸೇವಿಸುತ್ತೇವೆ. ಆದರೆ ಅವುಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ದೇಹ ಮತ್ತು ಮನಸ್ಸಿಗೆ ಪ್ರಯೋಜನಕಾರಿಯಾಗಿರುವ ಹಣ್ಣು, ಹಂಪಲು, ತರಕಾರಿ, ಸಿಹಿ ಇರದ ಇತರ ಪೌಷ್ಠಿಕ ಆಹಾರ ಪದಾರ್ಥಗಳನ್ನು ಕಷ್ಟಪಟ್ಟು ಸೇವಿಸುತ್ತೇವೆ. ಯಾವುದೇ ಆಹಾರವನ್ನು ಸೇವಿಸುವ ಮುನ್ನ ಅದರಲ್ಲಿರುವ ಪೌಷ್ಠಿಕಾಂಶಗಳು, ಪ್ರೊಟೀನ್, ವಿಟಮಿನ್‍ಗಳ ಕುರಿತಾದ ಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಂತರ ಬಳಸಬೇಕು. ಮುಖ್ಯವಾಗಿ ರುಚಿಕರವಾಗಿರುವ ಆಹಾರವೆಲ್ಲವೂ ಪೌಷ್ಠಿಕಾಂಶಗಳನ್ನು ಹೊಂದಿರುವುದಿಲ್ಲ. ಆಹಾರ ಪದಾರ್ಥಗಳನ್ನು ಸೇವಿಸುವಾಗ ರುಚಿಗಿಂತ ಪೌಷ್ಠಿಕಾಂಶಕ್ಕೆ ಆದ್ಯತೆ ನೀಡಿದಲ್ಲಿ ಕಾಯಿಲೆಗಳಿಂದ ಮುಕ್ತವಾದ ಜೀವನ ನಡೆಸಬಹುದು.










