ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇತ್ತೀಚಿನ ದಿನಗಳಲ್ಲಿ ವಯಸ್ಕರು ಹಾಗೂ ಮಧ್ಯಮ ವಯಸ್ಕರೇ ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದ್ದು, ಸೋಂಕಿನ ಬಗ್ಗೆ ಯಾವುದೇ ನಿರ್ಲಕ್ಷ ಬೇಡ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 20-45 ವರ್ಷದ ಒಳಗಿನ 2 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ತಗುಲಿದೆ ಎಂದು ದೃಢವಾದ ಬಳಿಕ ಆಸ್ಪತ್ರೆಗೆ ತೆರಳದೇ ನಿರ್ಲಕ್ಷ ಮಾಡಿದರೆ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಅಲ್ಲದೇ ಈಗಾಗಲೇ ಆಸ್ಪತ್ರೆಗೆ ದಾಖಲಾದ 14 ದಿನದೊಳಗೆ 2,500 ಮಂದಿ ಸೋಂಕಿ ಬಲಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಬೆಂಗಳೂರು ಒಂದರಲ್ಲೇ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಶೇ. 20ರಷ್ಟು ವಯಸ್ಕರು, ಮಧ್ಯಮ ವಯಸ್ಕರೇ ಬಲಿಯಾಗಿರುವುದು ಆತಂಕಕಾರಿ ಸಂಗತಿ ಎಂದು ತಜ್ಞರು ತಿಳಿಸಿದ್ದಾರೆ.
ಸೋಂಕಿನ ಬಗ್ಗೆ ನಿರ್ಲಕ್ಷ ವಹಿಸಿ ಸೋಂಕು ಹೆಚ್ಚಾದರೆ ಅಂತವರಿಗೆ ವೈದ್ಯರಿಂದಲೂ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ಕೊನೆ ಘಳಿಗೆಯಲ್ಲಿ ಬಂದು ಆಸ್ಪತ್ರೆಗೆ ದಾಖಲಾದರೆ ಅವರನ್ನು ಬದುಕುಳಿಸಲು ಸಾಧ್ಯವಾಗುವುದೇ ಇಲ್ಲ. ಸೋಂಕು ಪತ್ತೆಯಾದ ಕೂಡಲೇ ಆಸ್ಪತ್ರೆಗೆ ದಾಖಲಾದರೆ ಮಾತ್ರ ನಿಮ್ಮ ಜೀವ ಉಳಿಸಲು ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.










