ಮುಂಬೈ : ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಸೆ.8 ರಂದು ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿ ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಕಳೆದ ಒಂದು ತಿಂಗಳಿನಿಂದ ಬಂಧನದಲ್ಲಿದ್ದ ರಿಯಾ ಚಕ್ರವರ್ತಿ ಅವರ ನ್ಯಾಯಾಂಗ ಬಂಧನ ನಿನ್ನೆಗೆ ಅಂತ್ಯವಾದ ಹಿನ್ನೆಲೆ, ಪ್ರಕರಣದ ಅರ್ಜಿ ವಿಚಾರಣೆ ಮುಂಬೈನ ಹೈಕೋರ್ಟ್ನಲ್ಲಿ ನಡೆಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ರಿಯಾ ಚಕ್ರವರ್ತಿ ಸೇರಿದಂತೆ ಈ ಪ್ರಕರಣದಲ್ಲಿ ಬಂಧಿತರಾಗಿದ್ದ 20 ಮಂದಿಗೂ ಅ. 20ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಒಂದೆಡೆ ರಿಯಾ ಚಕ್ರವರ್ತಿ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ರಿಯಾ ಚಕ್ರವರ್ತಿ ಅವರಿಗೆ ಮುಂಬೈ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಷರತ್ತು ಬದ್ಧ ಜಾಮೀನು ವಿಧಿಸಿದ್ದು, ಬಿಡುಗಡೆಯಾದ ಬಳಿಕ 10 ದಿನಗಳ ಕಾಲ ಪೊಲೀಸ್ ಠಾಣೆಗೆ ಬಂದು ಹಾಜರಾತಿಗೆ ಸಹಿ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಇನ್ನು ರಿಯಾ ಚಕ್ರವರ್ತಿ ಅವರ ಸಹೋದರ ಶೋವಿಕ್ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡಿದೆ.










