ಮೂಡಿಗೆರೆ : ಕೆಳಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ-ಅಧ್ಯಕ್ಷರಾಗಿ ಸತೀಶ್ ಹೆಚ್.ಬಿ, ಉಪಾಧ್ಯಕ್ಷರಾಗಿ ಕಲ್ಲೇಶ್ ಅವಿರೋಧ ಆಯ್ಕೆ.

604
firstsuddi

ಮೂಡಿಗೆರೆ : ಇಂದು ಮಧ್ಯಾಹ್ನ ಕೆಳಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸತೀಶ್ ಹೆಚ್.ಬಿ ಹಾಗೂ ಉಪಾಧ್ಯಕ್ಷರಾಗಿ ದಿಣ್ಣೆಕೆರೆ ಕಲ್ಲೇಶ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಸತೀಶ್ ಹೆಚ್.ಬಿ ಹಾಗೂ ದಿಣ್ಣೆಕೆರೆ ಕಲ್ಲೇಶ್ ಅವರನ್ನು ಹೊರತುಪಡಿಸಿ ಬೇರೆ ನಾಮಪತ್ರ ಸಲ್ಲಿಕೆಯಾಗದಿದ್ದ ಕಾರಣ ನಾಮಪತ್ರ ಸಲ್ಲಿದ್ದ ಇಬ್ಬರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣೆ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಹೆಚ್.ಬಿ ಅವರು, ಇಲ್ಲಿನ ಸಂಘವು ಪ್ರಾರಂಭವಾದಾಗಿನಿಂದಲೂ ರೈತರುಗಳಿಗೆ ಉಪಯುಕ್ತವಾದ ಚಟುವಟಿಕೆಗಳ ನಡೆಸುವುದರ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇಂದು ಸಂಘವು ಉತ್ತಮ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಎಂದರೆ ರೈತರವಾದ ಯೋಜನೆಗಳಿಂದ ಮಾತ್ರವೇ ಹೊರತು ಯಾವುದೇ ಅಡ್ಡದಾರಿಗಳಿಂದ ಅಲ್ಲ. ಅಧ್ಯಕ್ಷ ಸ್ಥಾನ ಒಲಿದಿರುವುದು ನನ್ನ ಊರುಮನೆಯ ರೈತರ ಸೇವೆಯನ್ನು ಮಾಡಲು ಎಂದು ಮನಗಂಡಿದ್ದೇನೆ. ರೈತನ ಸೇವೆ ದೇವರ ಸೇವೆ ಎಂದು ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಹೊಸ ರೀತಿಯ ಯೋಜನೆಗಳನ್ನು ರೂಪಿಸುವುದರ ಮೂಲಕ ರೈತರ ಅಭಿವೃದ್ಧಿಯಲ್ಲ ಸಹಭಾಗಿಯಾಗುತ್ತೇನೆ ಎಂದರು.
ನಂತರ ಮಾತನಾಡಿದ ಉಪಾಧ್ಯಕ್ಷ ದಿಣ್ಣೆಕೆರೆ ಕಲ್ಲೇಶ್ ಅವರು, ಗ್ರಾಮದ ಹೃದಯಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು, ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ವರದಾನವಾಗಿದೆ. ಎಲ್ಲರ ಏಳಿಗೆಯೇ ಸಹಕಾರ ಸಂಘದ ಮೂಲತತ್ವವಾಗಿದ್ದು, ಸರಕಾರದಿಂದ ಸಿಗುತ್ತಿರುವ ಸವಲತ್ತುಗಳನ್ನು ಎಲ್ಲಾ ರೈತರುಗಳು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಕಾಣಬೇಕು. ಆಧುನಿಕತೆ ಮುಂದುವರೆದಂತೆ ಬಹುತೇಕ ಸೇವೆಗಳು ಬೆರಳಂಚಿನಲ್ಲಿ ಸಿಗುತ್ತಿದ್ದು ಕಛೇರಿಗೆ ಬರುವ ಶ್ರಮವನ್ನು ಕಡಿಮೆ ಮಾಡಿದೆ. ಆದರೂ ರೈತ ಬಾಂಧವರು ಸಂಘದ ಕಛೇರಿಗೆ ಬಂದು ಎಲ್ಲರೊಡನೆ ಬೆರೆತು ಮಾರ್ಗದರ್ಶನ ನೀಡಬೇಕು ಎಂದರು.
ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಹೆಚ್.ಲೋಕೇಶ್, ಬಿಜೆಪಿ ಆಲ್ದೂರು ಮಂಡಳ ಉಪಾಧ್ಯಕ್ಷ ಪ್ರಕ್ಷಿತ್ ಮುಳ್ಳುಂಡೆ, ಸಹಕಾರಿ ಸಂಘದ ಸದಸ್ಯರುಗಳಾದ ತಾರಾಮಣಿ ಶಂಕರೇಗೌಡ, ಧರ್ಮಿ ಕೆಳಗೂರು, ಸುಧಾ ಪ್ರದೀಪ್, ಚಂದ್ರೇಗೌಡ ಕೆಳಗೂರು, ಬಸವೇಗೌಡ ಮಣಿಮಕ್ಕಿ, ವೆಂಕಟೇಶ್ ಮಣಿಮಕ್ಕಿ, ದ್ರಾಕ್ಷಾಯಿಣಿ ಮಡೆನೇರಳು ಧರ್ಮೇಶ್ ಕೆಳಗೂರು ಸೇರದಂತೆ ಇತರೆ ಸದಸ್ಯರುಗಳು, ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.