ನಾಡಿನ ನೆಲ,ಜಲ, ಸ್ವಚ್ಚ ಮತ್ತು ಸುಂದರ ಪರಿಸರವನ್ನು ಸಂರಕ್ಷಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಜವಾಬ್ದಾರಿ: ಮೋಟಮ್ಮ…

301
firstsuddi

ಮೂಡಿಗೆರೆ:ನಾಡಿನ ನೆಲ,ಜಲ, ಸ್ವಚ್ಚ ಮತ್ತು ಸುಂದರ ಪರಿಸರವನ್ನು ಸಂರಕ್ಷಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಮೋಟಮ್ಮ ಹೇಳಿದರು.
ಮೂಡಿಗೆರೆಯ ಶಿಶು ಅಭಿವೃದ್ದಿ ಇಲಾಖೆ ಕಛೇರಿಯ ಸಭಾಂಗಣದಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆ ಹಾಗೂ ಸಮಗ್ರ ಸಮುದಾಯ ಅಭಿವೃದ್ದಿ ಸಂಸ್ಥೆ ಸ್ವಸಹಾಯ ಸಂಘಗಳ ಸದಸ್ಯರಿಗೆ ಇತ್ತೀಚೆಗೆ ಏರ್ಪಡಿಸಿದ್ದ ನವೀಕರಿಸಬಹುದಾದ ಇಂಧನದ ಮಹತ್ವ ಹಾಗೂ ನೀರಿನ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯರು ಬಹಳಷ್ಟು ಶ್ರಮವಹಿಸಿ ನೆಲ, ಜಲ, ಸ್ವಚ್ಚ ಮತ್ತು ಸುಂದರ ಪರಿಸರವನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ, ಆದರೆ ಅದನ್ನು ನಾವು ಸ್ವಾರ್ಥದಿಂದ ಹಾಳುಗೆಡವುತ್ತಿದ್ದೇವೆ ಎಂದು ವಿಷಾದಿಸಿದರು.
ಈಗಲಾದರೂ ನಾವು ಎಚ್ಚೆತ್ತು ನೆಲ, ಜಲ, ಸ್ವಚ್ಚ ಮತ್ತು ಸುಂದರ ಪರಿಸರವನ್ನು ಮುತುವರ್ಜಿ ವಹಿಸಿ ಸಂರಕ್ಷಿಸಿದರೆ ಮಾತ್ರ ಅವು ಮುಂದಿನ ಪೀಳಿಗೆಗೆ ಉಳಿಯುತ್ತವೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಗ್ರ ಸಮುದಾಯ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಜೆ.ವಿನಾಯಕ ಸಾರ್ವಜನಿಕರಲ್ಲಿ ನವೀಕರಿಸಬಹುದಾದ ಇಂಧನದ ಮಹತ್ವ ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ದಿ ಸಂಸ್ಥೆಯ ಸಹಾಯಕ ಅಧಿಕಾರಿ ಉಮಾ ಶಂಕರ್, ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ಭಾರತಿ, ಶ್ರೀ ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷೆ ಸೌಮ್ಯ ಉಪಸ್ಥಿತರಿದ್ದರು.