ಸಮಾಜ ಮತ್ತು ದೇಶದ ಹಿತದೃಷ್ಠಿಯಿಂದ ಎಲ್ಲರೂ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಮೈಗೂಡಿಸಿಕೊಳ್ಳಬೇಕು: ಡಾ|| ಜಿ.ಭೀಮೇಶ್ವರ ಜೋಶಿ

386
firstsuddi

ಚಿಕ್ಕಮಗಳೂರು: ಸಮಾಜ ಮತ್ತು ದೇಶದ ಹಿತದೃಷ್ಠಿಯಿಂದ ಎಲ್ಲರೂ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೊರನಾಡು ಶ್ರೀ ಅನ್ನಪೂಣೇಶ್ವರಿ ದೇವಾಲಯದ ಧರ್ಮಕರ್ತ ಡಾ|| ಜಿ.ಭೀಮೇಶ್ವರ ಜೋಶಿ ಸಲಹೆ ಮಾಡಿದರು.
ಬೆಂಗಳೂರಿನ ಮಾತೃಭೂಮಿ ಸಂಸ್ಥೆ ತನ್ನ 13ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಕುವೆಂಪು ಕಲಾ ಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕುವೆಂಪು ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಭಾರತೀಯರು ಶೈಕ್ಷಣಿವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ ಬಹಳಷ್ಟು ಬೆಳೆದಿದ್ದೇವೆ ಆದರೆ ಜಾತಿ, ಮತ ಮತ್ತು ಧರ್ಮಗಳ ವಿಚಾರದಲ್ಲಿ ಸಂಕುಚಿತರಾಗಿ ನಾವು ಹಾಳಾಗುವುದರ ಜೊತೆಗೆ ಸಮಾಜ ಮತ್ತು ದೇಶವನ್ನೂ ಹಾಳುಗೆಡವುತ್ತಿದ್ದೇವೆ ಎಂದು ವಿಷಾದಿಸಿದರು.
ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಪಾಲಿಸಬೇಕು, ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಭಾವೈಕ್ಯತೆ ಬೆಳೆಯುತ್ತದೆ, ದೇಶದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ಕಿವಿಮಾತು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕುವೆಂಪು ವಿಶ್ವಮಾನವ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಸನ್ಮಾನ ಮತ್ತು ಗೌರವಗಳು ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುವುದರ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ ಎಂದರು.
ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ ಹೆಚ್.ಎಸ್.ಭೋಜ್ಯಾನಾಯ್ಕ್ ಮಾತನಾಡಿ ಇಂದಿನ ಪೀಳಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು, ಕುವೆಂಪು ಅವರ ಆಶಯದಂತೆ ಸಮಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತೃಭೂಮಿ ಸಂಸ್ಥೆ ಕಳೆದ 13 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಸಾಧಕರಿಗೆ ಸಮಾರಂಭದಲ್ಲಿ ಕುವೆಂಪು ವಿಶ್ವಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು, ತರೀಕೆರೆಯ ಬಿ.ಎಸ್.ಭಗವಾನ್ ಅವರು ಗಾಯಕ ಪಿ.ಬಿ.ಶ್ರೀನಿವಾಸ್ ಅವರ ಧಾಟಿಯಲ್ಲಿ ಹಾಡಿದ ನಾಡಗೀತೆ ಮತ್ತು ಯುಗಧರ್ಮದ ರಾಮಣ್ಣ ಅವರ ತತ್ವಪದಗಳ ಗಾಯನ ಗಮನ ಸೆಳೆಯಿತು.
ಸಿದ್ದಗಂಗಾ ಮಠದ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಮಾತೃಭೂಮಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ|| ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು, ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕಿ ಪದ್ಮಾ ತಿಮ್ಮೇಗೌಡ, ಜಾನಪದ ವಿದ್ವಾಂಸ ಡಾ|| ಬಸವರಾಜ ನೆಲ್ಲಿಸರ ಉಪಸ್ಥಿತರಿದ್ದರು.
ಅಜ್ಜಂಪುರ ಎಸ್.ಶೃತಿ ಕಾರ್ಯಕ್ರಮವನ್ನು ನಿರೂಪಿಸಿದರು, ಗಿರೀಶ್ ಸ್ವಾಗತಿಸಿದರು, ಇಮ್ರಾನ್ ಅಹಮದ್ ಬೇಗ್ ವಂದಿಸಿದರು.