ಉಡುಪಿ: ಯಕ್ಷಗಾನ ತಾಳಮದ್ದಳೆಯ ಹೆಸರಾಂತ ಅರ್ಥದಾರಿ ಮಲ್ಪೆ ವಾಸುದೇವ ಸಾಮಗ(71) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಖ್ಯಾತ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರು ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದವರು. ವೇಷಧಾರಿ ಯಾಗಿ, ಪ್ರಸಂಗ ಕರ್ತ ರಾಗಿ ತಾಳಮದ್ದಳೆ ಅರ್ಥಧಾರಿ ಯಾಗಿ ಅವರು ಅನನ್ಯ ಸಾಧನೆಯನ್ನು ಮಾಡಿದ್ದರು.ಇವರು ಧರ್ಮಸ್ಥಳ, ಕದ್ರಿ, ಕರ್ನಾಟಕ, ಸುರತ್ಕಲ್, ಸಾಲಿಗ್ರಾಮ, ಬಗ್ವಾಡಿ, ಸೌಕೂರು ಮೇಳಗಳಲ್ಲಿಯೂ ಕಲಾ ಸೇವೆ ಸಲ್ಲಿಸಿದ್ದಾರೆ. ಉತ್ತರಕುಮಾರ, ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ ಮೊದಲಾದ ಪಾತ್ರಗಳು ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿತು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.










