ನವದೆಹಲಿ : ಮಾಜಿ ಮುಖ್ಯ ನ್ಯಾಯಮೂರ್ತಿಯಾದ ರಂಜನ್ ಗೊಗೊಯ್ ಅವರು ಇಂದು ರಾಜ್ಯಸಭಾ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನ್ಯಾಯ ಶಾಸ್ತ್ರಜ್ಞ ಕೆಟಿಎಸ್ ತುಳಸಿ ಅವರ ನಿವೃತ್ತಿಯ ಬಳಿಕ ತೆರವಾಗಿದ್ದ ಹುದ್ದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಂಜನ್ ಗೊಗೊಯ್ ಸವರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಬಳಿಕ ಸೋಮವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಗೊಗೊಯ್ ಅವರ ಹೆಸರನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಅದರಂತೆ ಇಂದು ಮಾಜಿ ಸಿಜೆಐ ರಂಜನ್ ಗೊಗೊಯ್ ಅವರು ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾಜಿ ಸಿಜೆಐ ಆಗಿದ್ದ ರಂಜನ್ ಗೊಗೊಯ್ ಅವರು ರಫೇಲ್ ಒಪ್ಪಂದ, ಅಸ್ಸಾಂನ ರಾಷ್ಟ್ರೀಯ ನಾಗರೀಕ ನೊಂದಾಣಿ, ಶಬರಿಮಲೆ ಮಹಿಳೆಯರ ಪ್ರವೇಶ ಹಾಗೂ ಅಯೋಧ್ಯೆ ಭೂ ವಿವಾದದ ಕುರಿತು ಐತಿಹಾಸಿಕ ತೀರ್ಪನ್ನು ಪ್ರಕಟಿಸಿ ಕಳೆದ ವರ್ಷ ನವೆಂಬರ್ನಲ್ಲಿ ನಿವೃತ್ತರಾದರು.










