ಮುಂಬೈ : ಬಲೂನ್ ನುಂಗಿ ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಮಹರಾಷ್ಟ್ರದ ಅಂಧೇರಿಯಲ್ಲಿ ನಡೆದಿದೆ. ಮೃತ ಮಗು ತನ್ನ ಸಹೋದರಿಯೊಂದಿಗೆ ಬಲೂನ್‍ಗೆ ಗಾಳಿ ತುಂಬುವ ಆಟವಾಡುತ್ತಿದ್ದ ವೇಳೆ ಮಗು ಬಲೂನ್‍ನನ್ನು ನುಂಗಿದ್ದು, ಬಲೂನ್ ಗಂಟಲಿನಲ್ಲಿ ಸಿಲುಕಿಕೊಂಡು ಮಗು ಒದ್ದಾಡುತ್ತಿದ್ದನು. ಮಗು ಒದ್ದಾಡುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಗಂಟಲಿನಿಂದ ಬಲೂನ್ ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಬಲೂನ್ ತೆಗೆಯಲು ಆಗದೇ ಇದ್ದಾಗ ಆತಂಕಗೊಂಡ ಪೋಷಕರು ಕೂಡಲೇ ಸಮೀಪದ ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿಗಳು ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಬಳಿಕ ಅಲ್ಲಿಂದ ಮಗುವನ್ನು ಅಂಧೇರಿಯ ನಾನಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಅಂಧೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










