ಶ್ರೀನಗರ : ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ನಿನ್ನೆ ಜಮ್ಮು ಕಾಶ್ಮೀರಾದ ಪುಲ್ವಾಮಾ ಜಿಲ್ಲೆಯ ಪಾಂಪೋರ್‍ನ ಲಾಲ್ಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿಯನ್ನು ತಿಳಿದು ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ನಾಗರೀಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಲಾಲ್ಪೋರಾ ಪ್ರದೇಶವನ್ನು ಸಂಪೂರ್ಣ ಸುತ್ತುವರೆದ ಯೋಧರು ಕಾರ್ಯಾಚರಣೆ ಚುರುಕುಗೊಳಿಸಿ ಇಂದು ಬೆಳಗ್ಗೆ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










