ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಐದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲೂಕಿನ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ.
ಇನ್ನು ಭಾರೀ ಮಳೆಯಿಂದ ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿರೋದ್ರಿಂದ ಜನರಲ್ಲಿ ಆತಂಕ ಮೂಡಿದೆ. ಮಳೆಯ ರೌದ್ರನರ್ತನದಿಂದ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಹೇಮಾವತಿ ನದಿಯ ಪ್ರವಾಹದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಾಟಿ ಮಾಡಿದ ಭತ್ತದ ಬೆಳೆ ನಾಶವಾಗಿದ್ದು ನೆರೆಯ ಭೀತಿಯನ್ನ ಸೃಷ್ಟಿಸಿದೆ.
ಇತ್ತ ಕಣತಿ ಗ್ರಾಮದಲ್ಲಿ ಆನೆಬಿದ್ದ ಹಳ್ಳ ಅವಾಂತರವನ್ನ ಹುಟ್ಟು ಹಾಕಿದ್ದು ಕಾಫಿತೋಟಕ್ಕೆ ಹಳ್ಳದ ನೀರು ನುಗ್ಗಿದ ಪರಿಣಾಮ ಕಾಫಿ ಮೆಣಸು ಅಡಿಕೆ ಬೆಳೆಯೂ ನಾಶವಾಗಿದೆ. ಇದರ ಜೊತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಮುಳ್ಳಯ್ಯನ ಗಿರಿ ರಸ್ತೆಯ ಮಾರ್ಗದಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಇದ್ರಿಂದ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ ರಸ್ತೆ ಮಾರ್ಗವನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಗಿರಿಶ್ರೇಣಿಗಳಿಗೆ ತೆರಳದಂತೆ ಚಿಕ್ಕಮಗಳೂರು ಸಮೀಪದ ಕೈಮರ ಚೆಕ್ ಪೋಸ್ಟ್ ಬಳಿ ಪ್ರವಾಸಿಗರ ವಾಹನಗಳನ್ನ ತಡೆದು ಮುನ್ನೆಚ್ಚರಿಕೆಯಾಗಿ ವಾಪಸ್ಸು ಕಳಿಸಲಾಗುತ್ತಿದೆ.